ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಎಸ್ಪಿ ಕರೆ
ದಸರಾ ಕ್ರೀಡಾಕೂಟಕ್ಕೆ ಮೆರುಗು ತಂದ ಕಬಡ್ಡಿ ಆಟ

ಮಡಿಕೇರಿ, ಅ.8 : ಮಡಿಕೇರಿ ದಸರಾ ಜನೋತ್ಸವದ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ದಸರಾ ಕ್ರೀಡಾ ಕೂಟಕ್ಕೆ ಮೆರುಗು ತಂದಿತು. ಸುಮಾರು 25 ತಂಡಗಳು ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದವು.
ಸ್ವತ: ಮೈದಾನಕ್ಕೆ ಇಳಿದು ಕಬಡ್ಡಿ ಆಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಪಿ.ರಾಜೇಂದ್ರ ಪ್ರಸಾದ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಹೆಚ್ಚು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಕ್ರೀಡೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಜೀವನವನ್ನು ಕೂಡ ಕ್ರೀಡೆಯಂತೆ ಸಮಾನವಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು. ಕ್ರೀಡಾ ಮನೋಭಾವದ ಮೂಲಕವೇ ಪ್ರತಿಯೊಂದು ಸ್ಪರ್ಧೆಗಳನ್ನು ಎದುರಿಸಬೇಕೆಂದು ಸಲಹೆ ನೀಡಿದ ಎಸ್ಪಿ ರಾಜೇಂದ್ರ ಪ್ರಸಾದ್ ಯುವ ಸಮೂಹ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಸದಾ ಮುತ್ತಪ್ಪ, ಉಪಾಧ್ಯಕ್ಷ ಸುನೀಲ್ ನಂಜಪ್ಪ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಹಾರ್, ನಗರಸಭಾ ನಾಮ ನಿರ್ದೇಶಿತ ಸದಸ್ಯ ಉಸ್ಮಾನ್, ಪ್ರಮುಖರಾದ ಮನು ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





