ಯುವಜನತೆ ಇಚ್ಛಾಶಕ್ತಿಯ ಮೂಲಕ ಉತ್ತಮ ಪ್ರಜೆಗಳಾಗಲಿ: ಶಾಸಕ ಅಪ್ಪಚ್ಚುರಂಜನ್
ವಾರ್ಷಿಕಶಿಬಿರ

ಸುಂಟಿಕೊಪ್ಪ,ಅ.8: ಪ್ರತಿಯೊಬ್ಬ ಯುವಜನತೆಯುತನ್ನೊಳಗೆ ಸೇರಿರುವ ಇಚ್ಛಾಶಕ್ತಿಯನ್ನು ಸಾದರ ಪಡಿಸುವ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಮಾದಾಪುರ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕಶಿಬಿರವನ್ನು ಗರಗಂದುರು ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾಗಾಂಧಿ ಸ್ಥಾಪಿಸಿದ ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳ ಮಾನಸಿಕ ಬುದ್ಧಿಶಕ್ತಿ ವಿಕಾಸನಕ್ಕೆ ಮತ್ತು ವ್ಯಕ್ತಿತ್ವ ವಿಕಾಸನಕ್ಕೆ ನಾಂದಿ ಆಗಲಿದೆ ಎಂದು ಹೇಳಿದರು.
ಶಿಬಿರದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪ್ರತಿ ವಿಷಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದ್ದು, ಇಲ್ಲಿ ಕಲಿತ ವಿಷಯಗಳನ್ನು ಇಲ್ಲಿಂದ ಹೊರಹೋದ ನಂತರ ಮರೆಯದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಗ್ರಾಮೀಣ ಪ್ರದೇಶ ಉದ್ಧಾರ ಆದರೆ ದೇಶ ಉದ್ಧಾರ ಆದಂತೆ. ಈ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿಯತ್ತ ಯುವ ಜನತೆ ಚಿಂತಿಸಬೇಕು. ಹಾಗೆಯೇ ವಿದ್ಯಾಥಿಗಳಿಗೆ ತಮ್ಮ ಪ್ರತಿಭೆ ಹೊರಹೊಮ್ಮಿಸಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಹಕಾರಿಯಾಗಲಿದ್ದು, ಮಾದಕ ದ್ರವ್ಯಗಳನ್ನು ಸೇವಿಸುವ ಅಭ್ಯಾಸದಿಂದ ವಿದ್ಯಾರ್ಥಿಗಳು ದೂರವಿಬೇಕೆಂದು ಅವರು ಸಲಹೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿ.ಚೆನ್ನಮ್ಮ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಲೇ. ಕರ್ನಲ್ ಬಿವಿಜಿ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದಂತಹ ಜೀವನವಾಗಿದ್ದು, ಇದರ ಸದುಪಯೋಗಪಡಿಸಿಕೊಂಡು ಸ್ವಾರ್ಥವನ್ನು ಬದಿಗಿರಿಸಿ ಸೇವಾ ಮನೋಭಾವನೆ ರೂಢಿಸಿಕೊಳ್ಳಬೇಕು. ಹಾಗೆಯೇ ಸಮಯಕ್ಕೆ ಬೆಲೆ ನೀಡುತ್ತಾ ಮನುಷ್ಯನ ದೊಡ್ಡಗುಣ ಹೃದಯ ಶ್ರೀಮಂತಿಕೆಯಲ್ಲಿ ಒಳ್ಳೆ ಭಾವನೆಯಲ್ಲಿ ಅಡಕವಾಗಿದೆ ಎಂದು ಹೇಳಿದರು.
ನಮ್ಮ ಸಂಸ್ಥೆ ಸಮಯಪಾಲನೆಗೆ ಪ್ರಥಮ ಆದ್ಯತೆ ನೀಡುತ್ತದೆ. ಇದನ್ನು ಅರಿತುಕೊಂಡು ಶಿಬಿರದಲ್ಲಿ ಕಲಿಸುವ ಉದಾತ್ತ ವಿಚಾರಗಳನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೆನ್ನಮ್ಮ ಕಾಲೇಜಿನ ನಿರ್ದೇಶಕಿ ಚಿತ್ರಾ ಸುಬ್ಬಯ್ಯ, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ,ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಡಿ.ನೀತಾ ಮಾತನಾಡಿ, ಗರಗಂದೂರು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ, ಹರದೂರು ಗ್ರಾ.ಪಂ.ಅಧ್ಯಕ್ಷೆ ಮತ್ತಿತರರು ಉಪಸ್ಥಿತರಿದ್ದರು.







