ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಮನವಿ

ಕಾರವಾರ, ಅ.8: ಐಆರ್‌ಬಿ ಕಂಪೆನಿಯ ಬೇಜವಾಬ್ದಾರಿಯಿಂದ ಹಿಂದೆ ಅಪಘಾತಕ್ಕೀಡಾದ ದಂಪತಿಗೆ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಕಳೆದ ಜುಲೈ 7ರಂದು ದಾಂಡೇಲಿಯ ಗಣೇಶ ನಗರದ ಜಾವೀರ್ ಶೇಖ್ ಹಾಗೂ ಅವರ ಪತ್ನಿ ರುಕ್ಸಾರ್ ಅವರು ಸದಾಶಿಗಡದಲ್ಲಿರುವ ಕಾರವಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಮಗಾರಿ ವೇಳೆಯಲ್ಲಿ ಗುಡ್ಡದ ಕಲ್ಲು ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಕಂಪನಿಯವರಿಂದ ಕುಟುಂಬಕ್ಕೆ ಧನ ಸಹಾಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ, ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ತಾಲೂಕಾಧ್ಯಕ್ಷ ಶಬ್ಬಿರ್ ಶೇಖ್, ಸೋಮೇಶ್ ಆಚಾರಿ, ಅಮಿತ್ ನಾಯ್ಕ, ಇಮ್ರಾನ್ ಶೇಖ್ ರಾಜೇಂದ್ರ ಮಾದರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





