ನುರಿತ ವೆದ್ಯರ ವರ್ಗಾವಣೆ ರದ್ದುಪಡಿಸಲು ಆಗ್ರಹ

ಕಾರವಾರ, ಅ.8: ಇಲ್ಲಿನ ಜಿಲ್ಲಾಸ್ಪತ್ರೆ ಮತ್ತು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ನುರಿತ ತಜ್ಞ ವೈದ್ಯರನ್ನು ಬೇರೆ ತಾಲೂಕಿಗೆ ನಿಯೋಜನೆ ಮಾಡುವುದನ್ನು ರದ್ದು ಪಡಿಸಬೇಕು ಹಾಗೂ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಆಯುಷ ವಿಭಾಗವನ್ನು ಇದ್ದ ಸ್ಥಳದಲ್ಲಿಯೇ ಮುಂದುವರಿಸಬೇಕೆಂದು ಆಗ್ರಹಿಸಿ ಜನಶಕ್ತಿ ವೇದಿಕೆಯ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಅನೇಕ ದಶಕಗಳಿಂದ ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆಗೆ ತಜ್ಞ ವೈದ್ಯರ, ತಾಂತ್ರಿಕ ಸಿಬ್ಬಂದಿಗಳ ಕೊರತೆಯಿದ್ದು, ಈಗ ಇರುವ ವ್ಯವಸ್ಥೆಯಿಂದ ಇದ್ದವರನ್ನು ಬೇರೆ ತಾಲೂಕುಗಳಿಗೆ ವರ್ಗಾವಣೆ ಮಾಡಿದರೆ ಬಡ ರೋಗಿಗಳಿಗೆ ಸಮಸ್ಯೆಯಾಗುತ್ತದೆ. ಇದರಿಂದ ಪ್ರಸಕ್ತ ವರ್ಗಾವಣಾ ಆದೇಶ ಅವೈಜ್ಞಾನಿಕವಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಿಲ್ಲೆಯ ಎಲ್ಲ್ಲ ತಾಲೂಕುಗಳಲ್ಲಿ ವೈದ್ಯರ ಕೊರತೆಯಿದೆ. ಆದರೆ ಜಿಲ್ಲಾಸ್ಪತ್ರೆಯಿಂದ ವರ್ಗಾವಣೆ ಮಾಡುವುದು ಸರಿಯಲ್ಲ. ಬೇರೆ ವೈದ್ಯರ ನೇಮಕಾತಿ ಮಾಡಬೇಕು. ಜಿಲ್ಲಾ, ತಾಲೂಕು ಆಸ್ಪತ್ರೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಲಾಗಿದೆ. ಕೇಂದ್ರ ಸರಕಾರದ ನೆರವಿನಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಆಯುಷ್ ವಿಭಾಗದ ಹೋಮಿಯೋಪತಿ, ಯುನಾನಿ, ನ್ಯಾಡುರೋಪತಿ ಸೇವೆಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸದೇ ಅಲ್ಲಿಯೇ ನಡೆಸಬೇಕು ಮತ್ತು ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮನವಿಯನ್ನು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರು ಸ್ವೀಕರಿಸಿದರು. ನಿಯೋಗದಲ್ಲಿ ಜನಶಕ್ತಿ ವೇದಿಕೆಯ ಮಾಧವ ನಾಯಕ, ಸುರೇಶ ನಾಯ್ಕ, ಸಹದೇವ ನಾಯ್ಕ, ರಾಜೀವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.





