ದಲಿತ ಯುವಕನ ಶಿರಚ್ಛೇದ ಖಂಡಿಸಿ ಇಂದು ಪ್ರತಿಭಟನೆ
ಬೆಂಗಳೂರು, ಅ.8: ಉತ್ತರಾಖಂಡದ ಕದರಿ ಗ್ರಾಮದಲ್ಲಿ ಮೇಲ್ವರ್ಗದವರು ದಲಿತ ಯುವಕನ ಶಿರಚ್ಛೇದ ಮಾಡಿರುವುದನ್ನು ಖಂಡಿಸಿ ಅ.9ರಂದು ಬೆಳಗ್ಗೆ 11:30ಕ್ಕೆ ನಗರದ ಪುರಭವನದ ಮುಂಭಾಗ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಡಿಎಸ್‌ಎಸ್(ಡಿ.ಜಿ.ಸಾಗರ್‌ಬಣ) ಸಂಘಟನಾ ಕಾರ್ಯದರ್ಶಿ ಇಂದ್ರಯ್ಯ ತಿಳಿಸಿದ್ದಾರೆ.
ಜನಪ್ರತಿನಿಧಿಗಳ ಜಾತೀಯತೆ, ಸ್ವಾರ್ಥ ಹಿತಾಸಕ್ತಿಗಳಿಂದಾಗಿ ದಿನಕ್ಕೊಬ್ಬ ದಲಿತ ಸಮುದಾಯದ ವ್ಯಕ್ತಿ ಮೇಲ್ಜಾತಿಗಳಿಂದ ಹತ್ಯೆಗೊಳಗಾಗುತ್ತಿದಾನೆೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಮೇಲ್ಜಾತಿಗಳು ದಲಿತರ ಮೇಲೆ ಹಲ್ಲೆಗಳನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ ಸಂವಿಧಾನ ಆಶಯ ಈಡೇರಿಲ್ಲ. ಹೀಗಾಗಿ ದಲಿತರ ಮೇಲಿನ ಹಲ್ಲೆಗಳು ಅವ್ಯಾಹತವಾಗಿ ಮುಂದುವ ರಿದಿದೆ. ಕನಿಷ್ಠ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಿಕ್ಷೆಯಿಂದ ಸಚಿವ ಹಾಗೂ ಶಾಸಕರಾಗಿರುವ ದಲಿತ ಸಮುದಾಯದ ಜನಪ್ರತಿನಿಧಿಗಳು ಸ್ವಾರ್ಥಿ ಹಾಗೂ ಭ್ರಷ್ಟರಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ಮನುವಾದಿಗಳ ಆಡಳಿತದಲ್ಲಿ ದಲಿತ ಸಮುದಾಯ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಈ ಹಲ್ಲೆ ಪ್ರಕರಣಗಳು ಹೀಗೆಯೆ ಮುಂದುವರಿದರೆ ದಲಿತ ಸಮುದಾಯಕ್ಕೆ ಪ್ರತ್ಯೇಕ ರಾಜ್ಯ ಕೊಡಬೇಕೆಂದು ಉಗ್ರ ಹೋರಾಟ ಮಾಡಲಾಗುವುದು. ದಲಿತರಿಲ್ಲದ ದೇಶ ಹೇಗೆ ಅಭಿವೃದ್ಧಿಯಾಗುತ್ತದೆ ಎಂದು ಚಿಂತಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.





