ಆರೋಪಿಯನ್ನು ಬಿಡುಗಡೆಗೊಳಿಸುವುದಾಗಿ ಹಣ ಪಡೆದು ವಂಚನೆ: ದೂರು
ಉಡುಪಿ, ಅ.8: ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಬಿಡುಗಡೆಗೊಳಿಸುವುದಾಗಿ ಮಹಿಳೆಯಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ರಾಡಿಯ ಸಾಹಿರಾ ಬಾನು(48) ಎಂಬವರ ಮಗ ಮುಹಮ್ಮದ್ ಹನೀಫ್ ಎಂಬಾತ ಆತ್ರಾಡಿ ಸಮೀಪದ ಶೇಡಿಗುಡ್ಡೆ ಎಂಬಲ್ಲಿ ಜು.14ರಂದು ಶೇಖ್ ಮಹಮ್ಮದ್ ತಸ್ಲೀಮ್ ಎಂಬಾತನನ್ನು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹಾಗೂ ಚಂದ್ರಿಕಾ ಶೆಟ್ಟಿ ಎಂಬವರು ಹನೀಫ್‌ನನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದಕ್ಕಾಗಿ ಸಾಹಿರಾ ಬಾನು ಅವರನ್ನು ರವಿ ಶೆಟ್ಟಿ ಹಾಗೂ ಪ್ರಸನ್ನ ಪದ್ಮನಾಭ ಕುಮಾರ್ ಎಂಬವರು ಉಡುಪಿ ಪ್ರವಾಸಿ ಬಂಗಲೆಗೆ ಕರೆಸಿ 15 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು.
ಅದಕ್ಕಾಗಿ ರವಿ ಶೆಟ್ಟಿ, ಅವರಿಂದ ಮುಂಗಡವಾಗಿ 70 ಸಾವಿರ ರೂ. ಹಣ ಪಡೆದಿದ್ದನು. ಸೆ.17ರಂದು 5 ಲಕ್ಷದ 3 ಚೆಕ್‌ಗಳನ್ನು ಕೂಡ ನೀಡಲಾಗಿದೆ. ಆದರೆ ಹಣ ಪಡೆದು 15 ದಿವಸ ಕಳೆದರೂ ರವಿ ಶೆಟ್ಟಿ, ನನ್ನ ಮಗನನ್ನು ಜೈಲಿನಿಂದ ಬಿಡುಗಡೆಗೊಳಿಸದೆ ಮೋಸ ಮಾಡಿದಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿ ಸಾಹಿರಾ ಬಾನು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.





