ರೊನಾಲ್ಡೊ 4 ಗೋಲು, ಪೋರ್ಚುಗಲ್‌ಗೆ ಜಯ
2018ರ ವರ್ಲ್ಡ್ ಕಪ್ ಅರ್ಹತಾ ಪಂದ್ಯ

ಪ್ಯಾರಿಸ್, ಅ.8: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ನಾಲ್ಕು ಗೋಲುಗಳ ಸಹಾಯದಿಂದ ಯುರೋ ಚಾಂಪಿಯನ್ ಪೋರ್ಚುಗಲ್ ತಂಡ 2018ರ ವರ್ಲ್ಡ್ ಕಪ್ ಅರ್ಹತಾ ಪಂದ್ಯದಲ್ಲಿ ಆ್ಯಂಡೊರ್ರಾ ತಂಡವನ್ನು 6-0 ಗೋಲುಗಳ ಅಂತರದಿಂದ ಮಣಿಸಿತು.
ಪಂದ್ಯ ಆರಂಭವಾದ ನಾಲ್ಕೇ ನಿಮಿಷಗಳಲ್ಲಿ ಅವಳಿ ಗೋಲು ಬಾರಿಸಿದ ರೊನಾಲ್ಡೊ ಪೋರ್ಚುಗಲ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. 2 ಹಾಗೂ 4ನೆ ನಿಮಿಷದಲ್ಲಿ ಗೋಲು ಬಾರಿಸಿದ ರೊನಾಲ್ಡೊ 47ನೆ ನಿಮಿಷದಲ್ಲಿ ಗೋಲು ಬಾರಿ ಹ್ಯಾಟ್ರಿಕ್ ಪೂರೈಸಿದರು. ರೊನಾಲ್ಡೊ ವೃತ್ತಿಜೀವನದಲ್ಲಿ ಬಾರಿಸಿದ 42ನೆ ಹ್ಯಾಟ್ರಿಕ್ ಗೋಲು ಇದಾಗಿದೆ. 68ನೆ ನಿಮಿಷದಲ್ಲಿ ನಾಲ್ಕನೆ ಗೋಲು ಬಾರಿಸಿದ ರೊನಾಲ್ಡೊ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಪೋರ್ಚುಗಲ್ ಪರ ಕವಾಕೊ ಕ್ಯಾನ್ಸೆಲೊ(44ನೆ ನಿ.) ಹಾಗೂ ವೆಲೆಂಟ್ ಸಿಲ್ವಾ(86ನೆ ನಿ.) ತಲಾ ಒಂದು ಗೋಲು ಬಾರಿಸಿದರು.
ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ರೊನಾಲ್ಡೊ ಯುರೋ 2016ರ ಫೈನಲ್‌ನಲ್ಲಿ ಆಡಿದ ಬಳಿಕ ಇದೇ ಮೊದಲ ಬಾರಿ ಪೋರ್ಚುಗಲ್ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದರು.
ಮಂಡಿನೋವಿನಿಂದಾಗಿ 3 ತಿಂಗಳ ಕಾಲ ವಿಶ್ರಾಂತಿ ಪಡೆದು ಫುಟ್ಬಾಲ್‌ಗೆ ವಾಪಸಾಗಿರುವ 33ರ ಹರೆಯದ ರೊನಾಲ್ಡೊ ಪಂದ್ಯ ಆರಂಭವಾಗಿ 2ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು.
90ನೆ ನಿಮಿಷದೊಳಗೆ ನಾಲ್ಕು ಗೋಲುಗಳನ್ನು ಬಾರಿಸಿ ಫಿಟ್‌ನೆಸ್ ಸಾಬೀತುಪಡಿಸಿದರು. ಬಿ ಗುಂಪಿನಲ್ಲಿ 3ನೆ ಸ್ಥಾನದಲ್ಲಿರುವ ಪೋರ್ಚುಗಲ್ ತನ್ನ ಮೊದಲ ಪಂದ್ಯದಲ್ಲಿ ಸ್ವಿಟ್ಝರ್ಲೆಂಡ್‌ನ ವಿರುದ್ಧ ಸೋತಿತ್ತು. ಜುಲೈನಲ್ಲಿ ಯುರೋ ಕಪ್‌ನ ಫೈನಲ್‌ನಲ್ಲಿ ಪೋರ್ಚುಗಲ್‌ಗೆ 1-0 ಅಂತರದಿಂದ ಸೋತಿದ್ದ ಫ್ರಾನ್ಸ್ ತಂಡ ಕೆವಿನ್ ಗೊಮೆರೊ ಬಾರಿಸಿದ ಅವಳಿ ಗೋಲುಗಳ ಸಹಾಯದಿಂದ ಬಲ್ಗೇರಿಯಾ ತಂಡವನ್ನು 4-1 ಅಂತರದಿಂದ ಮಣಿಸಿತು.







