ಅಂತಾರಾಜ್ಯ ಜಲ ವಿವಾದಗಳನ್ನು ಎಚ್ಚರಿಕೆಯಿಂದ ಪರಿಹರಿಸಬೇಕು: ಅನಂತಕುಮಾರ್
ಹೊಸದಿಲ್ಲಿ, ಅ.8: ಸುದೀರ್ಘ ಕಾಲದಿಂದ ನ್ಯಾಯಾಲಯಗಳಲ್ಲಿ ಸಿಲುಕಿಕೊಂಡಿರುವ ಕಾವೇರಿ, ಮಹಾದಾಯಿ ಹಾಗೂ ಕೃಷ್ಣಾ ನದಿಗಳ ನೀರು ಹಂಚಿಕೆಯ ಕುರಿತಾದ ಅಂತಾರಾಜ್ಯ ವಿವಾದಗಳನ್ನು ‘ಎಚ್ಚರಿಕೆಯಿಂದ’ ಬಗೆಹರಿಸುವ ಅಗತ್ಯವಿದೆಯೆಂದು ಕೇಂದ್ರ ಸಚಿವ ಅನಂತಕುಮಾರ್ ಇಂದು ಹೇಳಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾಗಳ ನಡುವಿನ ಮಹಾದಾಯಿ ವಿವಾದವನ್ನು ಆದಷ್ಟು ಬೇಗ ನ್ಯಾಯಾಲಯದ ಹೊರಗೆ ಪರಿಹರಿಸುವ ಪ್ರಯತ್ನ ನಡೆಯುತ್ತಿದೆಯೆಂದು ಅವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್, ರಾಜ್ಯದ ಹೊರಗಿನ ಕನ್ನಡಿಗರ ಕುರಿತಾಗಿ ಇಲ್ಲಿ ಏರ್ಪಡಿಸಿದ್ದ ಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅನಂತಕುಮಾರ್, ಕಾವೇರಿ, ಮಹಾದಾಯಿ ಹಾಗೂ ಕೃಷ್ಣಾ ನದಿಗಳ ಅಂತಾರಾಜ್ಯ ನೀರು ಹಂಚಿಕೆಗೆ ಸಂಬಂಧಿಸಿದ ಕರ್ನಾಟಕದ ಹಲವು ಸಮಸ್ಯೆಗಳು ನ್ಯಾಯಾಲಯಗಳಲ್ಲಿ ಸುದೀರ್ಘ ಕಾಲದಿಂದ ಅನೇಕ ಹಂತಗಳಲ್ಲಿ ಬಾಕಿಯಿವೆ. ಅವುಗಳನ್ನು ಎಚ್ಚರಿಕೆಯಿಂದ ಬಗೆಹರಿಸುವ ಅಗತ್ಯವಿದೆ ಎಂದರು.
ಈ ಸಮಸ್ಯೆಗಳ ಕುರಿತು ಕರ್ನಾಟಕದ ಹಿತಾಸಕ್ತಿಗಾಗಿ ಪ್ರತಿಭಟನೆ ನಡೆಸಿದ ಸಾಹಿತಿಗಳನ್ನು ಕೊಂಡಾಡಿದ ಅವರು, ಪ್ರತಿಭಟನೆಗಳಿಗಿಂತಲೂ ಹೆಚ್ಚಾಗಿ, ರಾಜ್ಯದ ಕುರಿತಾಗಿ ಕೇಂದ್ರ ಸರಕಾರ ಹಾಗೂ ನ್ಯಾಯಾಂಗಗಳ ಮಟ್ಟದಲ್ಲಿ ವಿಶಾಲ ಜಾಗೃತಿಯನ್ನು ಸೃಷ್ಟಿಸುವ ಅಗತ್ಯವಿದೆಯೆಂದು ಅಭಿಪ್ರಾಯಿಸಿದರು.
ರಾಜ್ಯದ ಹಿತಾಸಕ್ತಿಗಾಗಿ ಕರ್ನಾಟಕದ ಸಂಸದರು ಪಕ್ಷ ಭೇದವಿಲ್ಲದೆ ಒಂದಾಗುತ್ತಾರೆ. ಆದರೆ, ದಾರಿಗಳು ಭಿನ್ನವಿರಬಹುದೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಭರವಸೆ ನೀಡಿದರು.
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ, ಮಹಾದಾಯಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸುವ ಪ್ರಯತ್ನವನ್ನು ನಡೆಸುತ್ತಿವೆ. ಈ ವಿಷಯದಲ್ಲಿ ತಾನು ಗೋವಾ ಹಾಗೂ ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಈ ನದಿಯ ನೀರು ಉತ್ತರಕನ್ನಡ ಜಿಲ್ಲೆಯಲ್ಲಿ ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕಾಗಿ ಎಷ್ಟು ಅಗತ್ಯವೆಂಬುದನ್ನು ವಿವರಿಸಿದ್ದೇನೆಂದು ಅನಂತಕುಮಾರ್ ಹೇಳಿದರು.





