68 ದಿನಗಳ ಉಪವಾಸ ವ್ರತದಿಂದ 13ರ ಹರೆಯದ ಜೈನ ಬಾಲಕಿ ನಿಧನ!
ಹೈದರಾಬಾದ್,ಅ.8: ಇಲ್ಲಿಯ 13ರ ಹರೆಯದ ಬಾಲಕಿಯೋರ್ವಳು ಪವಿತ್ರ ‘ಚೌಮಾಸಾ’ ಅವಧಿಯಲ್ಲಿ ಜೈನ ವಿಧಿಯಂತೆ 68 ದಿನಗಳವರೆಗೆ ನಿರಶನವನ್ನು ನಡೆಸಿದ ಬಳಿಕ ಕಳೆದ ವಾರ ನಗರದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾಳೆ.
ಎಂಟನೆ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆರಾಧನಾ ಎಂಬವಳನ್ನು ಉಪವಾಸವನ್ನು ಪೂರ್ಣ ಗೊಳಿಸಿದ ಎರಡು ದಿನಗಳ ಬಳಿಕ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಅಲ್ಲಿ ಆಕೆ ಹೃದಯಾಘಾತದಿಂದ ಮೃತ ಪಟ್ಟಿದ್ದಾಳೆ ಎಂದು ಬಾಲಕಿಯ ಕುಟುಂಬವು ತಿಳಿಸಿದೆ.
ಆರಾಧನಾಳ ಅಂತ್ಯ ಸಂಸ್ಕಾರದಲ್ಲಿ ಕನಿಷ್ಠ 600 ಜನರು ಭಾಗಿಯಾಗಿದ್ದರು. ಈ ವೇಳೆ ಆಕೆಯನ್ನು ‘ಬಾಲ ತಪಸ್ವಿ’ ಎಂದು ಕೊಂಡಾಡಲಾಗಿತ್ತು ಮತ್ತು ಅಂತಿಮ ಮೆರವಣಿಗೆಯನ್ನು ‘ಶೋಭಾಯಾತ್ರೆ’ ಎಂದು ಹೆಸರಿಸಲಾಗಿತ್ತು.
ಆರಾಧನಾಳ ಕುಟುಂಬವು ಚಿನ್ನಾಭರಣಗಳ ವ್ಯಾಪಾರ ನಡೆಸುತ್ತಿದ್ದು, ಸಿಕಂದರಾಬಾದ್‌ನ ಪೋಟ್ ಬಝಾರ್‌ನಲ್ಲಿ ಅಂಗಡಿಯನ್ನು ನಡೆಸುತ್ತಿದೆ. ಬಾಲಕಿ ಶಾಲೆಗೆ ಹೋಗುವುದನ್ನು ಬಿಟ್ಟು ಉಪವಾಸ ಕೈಗೊಳ್ಳಲು ಮನೆಯವರು ಅನುಮತಿ ನೀಡಿದುದಾದರೂ ಏಕೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಜೈನ ಧರ್ಮೀಯರು ಆಹಾರ ಮತ್ತು ನೀರನ್ನೂ ತೊರೆದು ತಮ್ಮನ್ನು ತಾವೇ ತೀವ್ರ ದಂಡನೆಗೊಳಪಡಿಸಿಕೊಳ್ಳುವುದು ವಾಡಿಕೆಯಾಗಿದೆ. ಇದನ್ನು ಧಾರ್ಮಿಕ ಮುಖಂಡರ ಸಭೆಗಳಲ್ಲಿ ವೈಭವೀಕರಿಸಲಾಗುತ್ತದೆ, ಪ್ರಶಂಸಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ಅವರಿಗೆ ಉಡುಗೊರೆಗಳೂ ಹರಿದು ಬರುತ್ತವೆ. ಆದರೆ, ಈ ಪ್ರಕರಣದಲ್ಲಿ ಉಪವಾಸ ಕೈಗೊಂಡಿದ್ದುದು ಅಪ್ರಾಪ್ತ ವಯಸ್ಕ ಬಾಲಕಿ ಮತ್ತು ಇದನ್ನು ನಾನು ಆಕ್ಷೇಪಿಸುತ್ತೇನೆ. ಇದು ಕೊಲೆಯಲ್ಲದಿದ್ದರೆ ಆತ್ಮಹತ್ಯೆಯಾಗಿದೆ ಎಂದು ಜೈನ ಸಮುದಾಯಕ್ಕೆ ಸೇರಿದವರೇ ಆದ ಲತಾ ಜೈನ್ ಎಂಬವರು ಹೇಳಿದ್ದಾರೆ.
ಆರಾಧನಾ ಈ ಹಿಂದೆಯೂ 41 ದಿನಗಳ ಉಪವಾಸವನ್ನು ಮಾಡಿ ದಕ್ಕಿಸಿಕೊಂಡಿದ್ದಳು ಎಂದು ಕುಟುಂಬದ ನಿಕಟ ಮೂಲಗಳು ತಿಳಿಸಿವೆ.
ನಾವು ಏನನ್ನೂ ಮುಚ್ಚಿಟ್ಟಿರಲಿಲ್ಲ.ಅದೆಷ್ಟೋ ಜನರು ಬಂದು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಆದರೆ ಈಗ ಕೆಲವರು ಆಕೆಗೆ 68 ದಿನಗಳ ಉಪವಾಸಕ್ಕೆ ಅನುಮತಿ ನೀಡಿದ್ದುದಕ್ಕಾಗಿ ನಮ್ಮತ್ತ ಬೆಟ್ಟು ಮಾಡುತ್ತಿದ್ದಾರೆ ಎಂದು ಆರಾಧನಾಳ ಅಜ್ಜ ಮಣಿಕ್‌ಚಂದ್ ಸಮ್ಧಾರಿಯಾ ಎಂಬವರು ಹೇಳಿದ್ದಾರೆ.
ಮದುಮಗಳಂತೆ ಸಿಂಗರಿಸಿಕೊಂಡಿದ್ದ ಆರಾಧನಾ ವೈಭವಯುತ ಸಾರೋಟಿನಲ್ಲಿ ಕುಳಿತಿರುವ ಮತ್ತು ಹಲವಾರು ಜನರು ಆಕೆಯನ್ನು ಸುತ್ತುವರಿದಿರುವ ಚಿತ್ರಗಳು ಇವೆ. ಉಪವಾಸ ಪೂರ್ಣಗೊಳಿಸಿದ ಬಳಿಕ ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಜಾಹೀರಾತುಗಳಲ್ಲಿ ಉಪವಾಸ ಸಮಾರೋಪಗೊಂಡ ಬಳಿಕ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ತೆಲಂಗಾಣದ ಸಚಿವೆ, ಶಾಸಕರು ಪಾಲ್ಗೊಂಡಿದ್ದ ಚಿತ್ರಗಳಿವೆ.
ತುಂಬು ಬಾಳನ್ನು ನಡೆಸಿದ ಹಿರಿಯರು ಸ್ವ ಇಚ್ಛೆಯಿಂದ ‘ಸಲ್ಲೇಖನ’ ವ್ರತವನ್ನು ಕೈಗೊಳ್ಳುವ ಮೂಲಕ ಆಹಾರ ಮತ್ತು ನೀರನ್ನು ವರ್ಜಿಸಿ ದೇಹ ತ್ಯಾಗ ಮಾಡುವ ಪದ್ಧತಿ ಜೈನರಲ್ಲಿದೆ. ಆದರೆ, ಇದನ್ನು ಬಲವಂತದಿಂದ ಹೇರುವಂತಿಲ್ಲ. ಇದೊಂದು ದುರಂತವಾಗಿದೆ ಮತ್ತು ನಾವಿದರಿಂದ ಪಾಠವನ್ನು ಕಲಿಯಬೇಕಾಗಿದೆ ಎಂದು ಕಾಚಿಗುಹ ಸ್ಥಾನಕದ ಮಹಾರಸ ರವೀಂದ್ರ ಮುನೀಜಿ ಹೇಳಿದ್ದಾರೆ.





