ಇಂದು ‘ಚಲೋ ಉಡುಪಿ’ ಸಮಾರೋಪ ಸಮಾವೇಶ: ಜಿಗ್ನೇಶ್ ಮೆವಾನಿ ಆಗಮನ

ಉಡುಪಿ, ಅ.8: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅ.9ರಂದು ಉಡುಪಿಯ ಬೀಡಿನಗುಡ್ಡೆ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ನಡೆಯುವ ‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಜಾಥಾದ ಸಮಾರೋಪ ಸಮಾವೇಶಕ್ಕೆ ಸಿದ್ಧತೆಗಳು ಪೂರ್ಣ ಗೊಂಡಿದ್ದು, ಇದರಲ್ಲಿ ಪ್ರಮುಖ ಭಾಷಣ ಮಾಡಲಿರುವ ಗುಜರಾತಿನ ಯುವ ನಾಯಕ ಹಾಗೂ ಉನಾ ಚಲೋ ಜಾಥಾದ ಮುಖ್ಯ ಸಂಘಟಕ ಜಿಗ್ನೇಶ್ ಮೆವಾನಿ ನಾಳೆ ಉಡುಪಿಗೆ ಆಗಮಿಸಲಿದ್ದಾರೆ.
ಬೆಳಗ್ಗೆ 11ಗಂಟೆಗೆ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಆವರಣದಿಂದ ಆರಂಭಗೊಳ್ಳುವ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬೀಡಿನಗುಡ್ಡೆ ರಂಗಮಂದಿರದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಅಲ್ಲೇ ವ್ಯವಸ್ಥೆ ಮಾಡಿರುವ ಭೋಜನದ ಬಳಿಕ ಸಮಾವೇಶವು ಆರಂಭಗೊಳ್ಳಲಿದೆ. ಇದರಲ್ಲಿ ನಾಡಿನ ಹಿರಿಯ ಚಿಂತಕರು, ಲೇಖಕರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಸಂಚಾಲಕ ಭಾಸ್ಕರ್ ಪ್ರಸಾದ್ ತಿಳಿಸಿದರು.
ಈಗಾಗಲೇ ಉಡುಪಿ ನಗರದ ಬೀದಿ ಬೀದಿಗಳಲ್ಲಿ ನೀಲಿ ಬಾವುಟ ಕಂಗೊಳಿಸುತ್ತಿದ್ದು, ರಾಜ್ಯಾದ್ಯಂತ ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈಗ ನಮ್ಮ ನಿರೀಕ್ಷೆ ಮೀರಿದ ಜನ ನಾನಾ ಜಿಲ್ಲೆಗಳಿಂದ ಆಗಮಿಸಲಿದ್ದು, ಸುಮಾರು 15-20 ಸಾವಿರ ಜನ ಭಾಗವಹಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ರಂಗಮಂದಿರದಲ್ಲಿ ಸಮಾವೇಶಕ್ಕೆ ಮೊದಲು ಮತ್ತು ಆನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಾಲು ಮತ್ತು ತಂಡದಿಂದ ಜಂಬೆ ಜಳಕ್(ಚರ್ಮವಾದ್ಯ), ಮಂಡ್ಯದ ಮಹಿಳಾ ಮುನ್ನಡೆ ಎಂಬ ನಗರಿ ತಂಡ ಭಾಗವಹಿಸಲಿದೆ. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾಡುಗಾರರು, ವಿವಿಧ ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿರುವರು. ಈ ಸಂದರ್ಭದಲ್ಲಿ ಮಂಜುನಾಥ್ ಬೆಂಗಳೂರು ರಚಿಸಿರುವ ಉದಯ ಸೊಸಲೆ ನಿರ್ದೇಶಿಸಿರುವ ‘ಚಲೋರೆ ಚಲ್’ ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿರುವ ಹುಲಿಕುಂಟೆ ಮೂರ್ತಿ ತಿಳಿಸಿದ್ದಾರೆ.







