ವಿಧವೆ ಮಹಿಳೆಯರಿಂದ ಮಂಗಳೂರು ದಸರಾ ಉದ್ಘಾಟನೆ
ಮುಖ್ಯಮಂತ್ರಿಗಳನ್ನು ದೇವರು ಕ್ಷಮಿಸುವುದಿಲ್ಲ: ದಸರಾ ಉದ್ಘಾಟನೆ ಸಭೆಯಲ್ಲಿ ಜನಾರ್ದನ ಪೂಜಾರಿ

ಮಂಗಳೂರು, ಅ.9: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ನಡೆಯುವ ಮಂಗಳೂರು ದಸರಾವನ್ನು ಇಂದು ಇಬ್ಬರು ವಿಧವ ಮಹಿಳೆಯರಿಂದ ಉದ್ಘಾಟಿಸಲಾಯಿತು.
ಮುಖ್ಯಮಂತ್ರಿಗಳು ಈ ಬಾರಿಯ ದಸರವನ್ನು ಉದ್ಘಾಟಿಸುವ ಬಗ್ಗೆ ನಿರ್ಧಾರವಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಗಳ ಆಗಮನ ರದ್ದಾದ ಹಿನ್ನೆಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಅರ್ಚಕಿಯಾಗಿರುವ ಇಬ್ಬರು ವಿಧವ ಮಹಿಳೆಯರಾದ ಇಂದಿರಾ ಶಾಂತಿ ಮತ್ತು ಲಕ್ಷ್ಮೀ ಶಾಂತಿಯವರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ದೇವಸ್ಥಾನದ ನವೀಕರಣದ ರೂವಾರಿ ಬಿ. ಜನಾರ್ಧನ ಪೂಜಾರಿಯವರು ಮಾತನಾಡಿ ಮಹಿಳೆಯರಿಗೆ ಇಡೀ ಜಗತ್ತೆ ಗೌರವ ಕೊಡಬೇಕಾಗಿದೆ. ವಿಧವೆಮಹಿಳೆಯರನ್ನು ಕುದ್ರೋಳಿ ಕ್ಷೇತ್ರದಲ್ಲಿ ಈ ಹಿಂದೆಯು ಗೌರವದಿಂದ ಕಾಣಲಾಗಿದೆ. ಈ ಬಾರಿಯ ದಸರವನ್ನು ವಿಧವ ಮಹಿಳೆಯರಿಂದ ಉದ್ಘಾಟಿಸುವ ಮೂಲಕ ಪುಣ್ಯದ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಜಗತ್ತಿಗೆ ಸಂದೇಶವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಮುಖಂಡರುಗಳಾದ ಜಯಶ್ರೀ ಸುವರ್ಣ, ವೇದಕುಮಾರ್, ನಿತ್ಯಾನಂದ ಕೋಟ್ಯಾನ್, ಉರ್ಮಿಳಾ ರಮೇಶ್ ಕುಮಾರ್, ಹೆಚ್.ಎಸ್.ಸಾಯಿರಾಂ, ದೇವೇಂದ್ರ ಪೂಜಾರಿ, ಬಿ.ಜಿ.ಸುವರ್ಣ, ರವಿಶಂಕರ್‌ಮಿಜಾರ್, ಲೀಲಾಕ್ಷ ಕರ್ಕೆರಾ, ಹರಿಕೃಷ್ಣ ಬಂಟ್ವಾಳ, ಪದ್ಮರಾಜ್ ಕರ್ಕೆರಾ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳನ್ನು ದೇವರು ಕ್ಷಮಿಸುವುದಿಲ್ಲ: ದಸರಾ ಉದ್ಘಾಟನೆ ಸಭೆಯಲ್ಲಿ ಜನಾರ್ದನ ಪೂಜಾರಿ
ಮಂಗಳೂರು ದಸರ ಉದ್ಘಾಟನೆಗೂ ಮುಂಚೆ ಮಾತನಾಡಿದ ದೇವಸ್ಥಾನ ನವೀಕರಣದ ರೂವಾರಿ , ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಮಂಗಳೂರು ದಸರಾ ಉದ್ಘಾಟನೆಗೆ ಬರಬೇಕಿದ್ದ ಮುಖ್ಯಮಂತ್ರಿಗಳು ಉದ್ಘಾಟನೆಗೆ ಬಾರದೆ ದೊಡ್ಡ ತಪ್ಪು ಮಾಡಿದ್ದು , ಅವರನ್ನು ದೇವರು ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳನ್ನು ಮಂಗಳೂರು ದಸರ ಉದ್ಘಾಟನೆಗೆ ನಾವು ಆಮಂತ್ರಿಸಿರಲಿಲ್ಲ. ಆದರೆ ಅವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಬರುತ್ತಾರೆ ಎಂಬುದು ನಮಗೆ ಪೊಲೀಸರ ಮೂಲಕ ತಿಳಿದುಬಂತು. ಅವರು ಬರುವ ಕಾರಣಕ್ಕೆ ತಪಾಸನೆಯನ್ನು ಪೊಲೀಸರು ನಡೆಸಿದ್ದರು. ಆದರೆ ಕೊನೆಯ ಕ್ಷಣದವರೆಗೂ ಮಂಗಳೂರು ದಸರ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ನಂಬಲಾಗಿತ್ತು. ಆದರೆ ಅವರು ಮಂಗಳೂರಿನಲ್ಲಿ ಸಂಜೆ ಕಾಂಗ್ರೆಸ್ ನಾಯಕರೊಬ್ಬರ ಮನೆಗೆ ಹೋದ ನಂತರ ಅವರ ನಿರ್ಧಾರ ಬದಲಾಗಿದೆ. ಅಲ್ಲಿ ಅವರನ್ನು ತಲೆ ಕೆಡಿಸಿ ಕುದ್ರೋಳಿ ಕ್ಷೇತ್ರಕ್ಕೆ ಹೋಗದಂತೆ ಮಾಡಿದ್ದಾರೆ. ಅವರು ಪೂಜಾರಿಯವರ ಮನೆಗೆ ಬರುವುದನ್ನು ನಿರಾಕರಿಸಿದ್ದಲ್ಲ. ಅವರು ಕ್ಷೇತ್ರಕ್ಕೆ ಬರುವುದನ್ನು ನಿರಾಕರಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆಜಾನ್ ಸಂದರ್ಭ ಭಾಷಣ ನಿಲ್ಲಿಸಿದ ಪೂಜಾರಿ
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ಮಂಗಳೂರು ದಸರ ಉದ್ಘಾಟನೆಗೆ ಮುಂಚೆ ಜನಾರ್ದನ ಪೂಜಾರಿಯವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಂಜೆಯ ಆಜಾನ್ ಆರಂಭವಾಗಿತ್ತು. ಈ ಸಂದರ್ಭದಲ್ಲಿ ತನ್ನ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಜನಾರ್ದನ ಪೂಜಾರಿಯವರು ಆಜಾನ್ ನಿಂತ ನಂತರ ತಮ್ಮ ಭಾಷಣವನ್ನು ಮುಂದುವರಿಸಿದರು.







