ಬಹುತ್ವ ಭಾರತದ ಅನಿವಾರ್ಯ: ಜಾವೇದ್
ನೀನಾಸಂ ಸಂಸ್ಕೃತಿ ಶಿಬಿರ-2016

ಸಾಗರ, ಅ.9: ಬಹುತ್ವ ಭಾರತದಲ್ಲಿ ಅನಿವಾರ್ಯ. ಇಲ್ಲ್ಲಿ ಸಿಗುವ ಬಹುತ್ವ ಪ್ರಪಂಚದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಖ್ಯಾತ ಹಿಂದಿ ಕವಿ ಜಾವೇದ್ ಅಖ್ತರ್ ಹೇಳಿದ್ದಾರೆ.
ತಾಲೂಕಿನ ನೀನಾಸಂನಲ್ಲಿ ಶನಿವಾರ 5ದಿನಗಳ ಕಾಲ ನಡೆಯುವ ‘ಸಂಸ್ಕೃತಿ ಶಿಬಿರ-2016’ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಭೌಗೋಳಿಕ ಲಕ್ಷಣದಲ್ಲಿ ಮರುಭೂಮಿ, ಪ್ರಸ್ಥಭೂಮಿ, ಗುಡ್ಡಗಾಡು, ಕಣಿವೆ, ಭಾಷೆ, ವೈವಿಧ್ಯ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸ ಎಲ್ಲವೂ ಭಿನ್ನವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದ ಮಣಿಪುರವರೆಗೆ ಜಾನಪದ ವೈವಿಧ್ಯ ಇದೆ. ಇವೆಲ್ಲದರಿಂದ ದೂರ ಇದ್ದೇವೆ ಎಂದು ಭ್ರಮಿಸುತ್ತೇವೆ. ಆದರೆ, ಏನೇ ಪ್ರಯತ್ನ ನಡೆದರೂ ಇವುಗಳಿಂದ ಪ್ರತ್ಯೇಕಗೊಳ್ಳಲು ಸಾಧ್ಯವಿಲ್ಲ ಎಂದರು. ಬಹುತ್ವ ಎನ್ನುವುದು ಒಂದು ರೀತಿಯ ಸವಾಲು. ಸಾಮಾನ್ಯವಾಗಿ ಹಿಂದಿ ಮತ್ತು ಉರ್ದು ಪ್ರತ್ಯೇಕ ಭಾಷೆಗಳೆಂದು ನಮ್ಮಲ್ಲಿ ತಪ್ಪು ಗ್ರಹಿಕೆ ಇದೆ. ಲಿಪಿ, ಶಬ್ದಸಂಪತ್ತು ಮುಂತಾದವುಗಳಷ್ಟೇ ಭಾಷೆಯಲ್ಲ. ಬೇರೊಂದು ಸಂಸ್ಕೃತಿ, ಭಾಷೆಯ ಬಗ್ಗೆ ನಮಗೆ ಅರಿವಿಲ್ಲದೆ ಇರುವುದು ನಮ್ಮೆಳಗಿನ ಕೀಳರಿಮೆಗೆ ಕಾರಣ ಎಂದ ಅವರು, ಒಂದು ಭಾಷೆಯನ್ನು ಬಳಸುತ್ತಿರುವಾಗ ಅದರೊಂದಿಗೆ ಬೇರೆ ಭಾಷೆಯ ಪದಗಳನ್ನು ನಮಗೇ ತಿಳಿಯದಂತೆ ಬಳಸುತ್ತಿರುತ್ತೇವೆ ಎಂದರು.
ಭಾರತದಲ್ಲಿ ಸೌಹಾರ್ದವೇ ನಿಜವಾದ ಆತ್ಮವಿಶ್ವಾಸ. ಹಿಂದೂ ಪದ್ಧತಿಯ ಅನೇಕ ಹಬ್ಬ ಹರಿದಿನಗಳಲ್ಲಿ ಮುಸ್ಲಿಮರು ಪಾಲ್ಗೊಳ್ಳುತ್ತಿದ್ದರು. ಮುಸ್ಲಿಮರ ಆಚರಣೆಗಳಲ್ಲಿ ಹಿಂದೂಗಳು ಪಾಲ್ಗೊಳ್ಳುವ ಮೂಲಕ ಸಾಮರಸ್ಯ ಉಂಟು ಮಾಡಿತ್ತು. ಆದರೆ, ಪ್ರಸ್ತುತ ಅಂತಹ ವಾತಾವರಣ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಜಾವೇದ್ ಅಖ್ತರ್, ಐದು ದಶಕಗಳ ಹಿಂದೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮಾಡಬಹುದಾಗಿದ್ದ ಬದಲಾವಣೆಯನ್ನು ಇಂದು ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ತಿಳಿಸಿದರು. ಶ್ರೀಧರ್ ಭಟ್ ಸ್ವಾಗತಿಸಿದರು. ಮುಂಬೈನ ಅತುಲ್ ತಿವಾರಿ ಪರಿಚಯಿಸಿದರು. ಜಸ್ವಂತ್ ಜಾಧವ್ ಪ್ರಾಸ್ತಾವಿಕ ಮಾತನ್ನಾಡಿದರು. ಶಿಬಿರದಲ್ಲಿ ಕೆ.ವಿ.ಅಕ್ಷರ, ಟಿ.ಪಿ. ಅಶೋಕ್, ಎಸ್ತರ್ ಅನಂತಮೂರ್ತಿ, ಗಿರಡ್ಡಿ ಗೋವಿಂದರಾಜ್, ರಾಘವೇಂದ್ರ ಪಾಟೀಲ್ ಮತ್ತಿತರರು ಹಾಜರಿದ್ದರು.







