ಗಮನ ಸೆಳೆದ ಮಕ್ಕಳ ಸಂತೆ: ವ್ಯಾಪಾರಕ್ಕೂ ಸೈ ಎಂದ ಮಕ್ಕಳು

ಮಡಿಕೇರಿ, ಅ.9: ತರಕಾರಿಯನ್ನು ಒಳಗೊಂಡಂತೆ ವಿವಿಧ ವಸ್ತುಗಳ ಮಾರಾಟ ಮಾಡುವಲ್ಲಿನ ಮಕ್ಕಳ ಕೌಶಲ್ಯ ಯಾವುದೇ ವ್ಯಾಪಾರಸ್ಥನ ಸಾಮರ್ಥ್ಯಕ್ಕಿಂತ ಕಡಿಮೆ ಏನು ಇರಲಿಲ್ಲ. ತಾವು ಖರೀದಿಗಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ಕೌಶಲಗಳು ನೈಜ ಸಂತೆಯನ್ನು ಮೀರಿಸುವಂತೆ ನಡೆಯುವ ಮೂಲಕ ಮಕ್ಕಳ ದಸರಾ ಉತ್ಸವದ ಮಕ್ಕಳ ಸಂತೆ ಗಮನ ಸೆಳೆಯಿತು.
ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಭಾನುವಾರ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತೆಗೆ ಜಿಲ್ಲೆಯ ವಿವಿಧೆಡೆಗಳ ಶಾಲಾ ಮಕ್ಕಳು ತರಕಾರಿ, ತಿಂಡಿ ತಿನಿಸು, ಆಟಿಕೆಗಳೊಂದಿಗೆ ಬಂದು ತಮ್ಮ ಚಿಂತನೆಗೆ ಅನುಗುಣವಾಗಿ ತೆರೆದ ಅಂಕಣದಲ್ಲಿ ಮಳಿಗೆ ತೆರೆದಿದ್ದರು.
ವಾರದ ಸಂತೆಯೊಳಗಿನ ಎಲ್ಲಾ ಅಂಶಗಳು ಮಕ್ಕಳ ಸಂತೆಯಲ್ಲಿ ಮಿಳಿತವಾಗಿತ್ತು. ಸುಮ್ಮನೆ ಕುತೂಹಲಕ್ಕೆಂದು ಬಂದ ಸಾಕಷ್ಟು ನಗರದ ನಿವಾಸಿಗಳು ಬ್ಯಾಗ್ ಹಿಡಿದು ಮಕ್ಕಳೊಂದಿಗೆ ಚರ್ಚಿಸಿ ವ್ಯಾಪಾರ ಮಾಡುವ ಮೂಲಕ ವಾರದ ಸಂತೆಯನ್ನು ಮಕ್ಕಳ ಸಂತೆಯಲ್ಲೆ ಮುಗಿಸುವ ಧಾವಂತ ತೋರಿದ್ದು ವಿಶೇಷ.
ಆಟಿಕೆಗಳು, ಜ್ಯೂಸ್, ಪಾನಿ ಪೂರಿ, ಕಬ್ಬು , ನಿಂಬೆ ಹಣ್ಣು ವಿವಿಧ ತರಕಾರಿಗಳ ಮಾರಾಟದ ಭರಾಟೆಯಿಂದ ಗಾಂಧಿ ಮೈದಾನದ ಆವರಣ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗಿಜಿ ಗುಟ್ಟುತ್ತಿತ್ತು.
ಸಂತೆಯಲ್ಲೊಂದು ಭಾರೀ ಗಾತ್ರದ ಶ್ವಾನ:
ಮಕ್ಕಳ ಸಂತೆಯ ನಡುವೆ ಸಂತ ಮೈಕೆಲ್ ಶಾಲಾ ವಿದ್ಯಾರ್ಥಿನಿ ತಮ್ಮ ಮನೆಯಲ್ಲಿ ಸಾಕಿರುವ ಜರ್ಮನ್ ಮೂಲದ ಬರ್ನಾಡ್ ಥಳಿಯ ನಾಯಿ ದ್ರೋಣವನ್ನು ಪ್ರದರ್ಶನಕ್ಕಿಡುವ ಮೂಲಕ ಜನರ ಪ್ರಮುಖ ಆಕರ್ಷಣೆಗೆ ಕಾರಣವಾಯಿತು.
ಮಕ್ಕಳ ಮಂಟಪ: ಮಕ್ಕಳ ದಸರಾ ಉತ್ಸವದಲ್ಲಿ ವಿವಿಧ ಪೌರಾಣಿಕ ಕಥಾ ಹಂದರವನ್ನು ಒಳಗೊಂಡಂತೆ ಮಕ್ಕಳೆ ಸಿದ್ಧಪಡಿಸಿದ ವಿವಿಧ ಮಂಟಪಗಳು ಆಕರ್ಷಕವಾಗಿ ಮೂಡಿ ಬಂದು ಗಮನ ಸೆಳೆಯಿತು. ಜಾನಪದ ಪರಿಷತ್‌ನಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ ಗ್ರಾಮೀಣ ಜಾನಪದ ಕ್ರೀಡೆಗಳಾದ ಚನ್ನಮಣೆ, ಗೋಲಿ ಆಟ, ಬುಗುರಿ ಆಟಗಳು ಕುತೂಹಲ ಮೂಡಿಸಿದವಾದರೆ, ಛದ್ಮವೇಷ ಸ್ಪರ್ಧೆ ಮೋಹಕವಾಗಿ ಮೂಡಿ ಬಂದಿತು.







