ಮೂಡಿಗೆರೆ ಮೀಸಲು ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್ ಸ್ಪರ್ಧೆಗೆ?
2018ರ ಅಸೆಂಬ್ಲಿ ಚುನಾವಣೆ
ಅಝೀಝ್ ಕಿರುಗುಂದ
ಚಿಕ್ಕಮಗಳೂರು, ಅ.9: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಮಂತ್ರಿಯೂ ಆದ ಡಾ.ಜಿ.ಪರಮೇಶ್ವರ್ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಕುರಿತು ಕಾಂಗ್ರೆಸ್ ಮುಖಂಡರಲ್ಲಿ ಚರ್ಚೆಗಳು ನಡೆಯುತ್ತಿದೆ.
ಡಾ.ಜಿ. ಪರಮೇಶ್ವರ್ ಅವರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವುದರಿಂದ ಮೀಸಲು ಕ್ಷೇತ್ರವಾದ ಮೂಡಿಗೆರೆ ವಿಧಾನಸಭಾ ಕ್ಷೇತ್ರದಾದ್ಯಂತ ಜನ ಸಾಮಾನ್ಯರಿಗೆ ಚಿರಪರಿಚಿತವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆಯಲ್ಲಿ ಸ್ಪರ್ಧಿಸಿದರೆ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಖದರು ಮೇಳೈಸಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಜಿಲ್ಲೆಯ ಕಾಂಗ್ರೆಸ್‌ನ ಹಿರಿಯ ಮುಖಂಡರು ಡಾ.ಜಿ.ಪರಮೇಶ್ವರ್‌ರನ್ನು ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಓಲೈಸುವ ಲೆಕ್ಕಾಚಾರದಲ್ಲಿರುವ ಮಾಹಿತಿಯಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 2004, 2008 ಮತ್ತು 2013ರ ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯವಾಗಿದೆ. ಈ ಮೂರು ಚುನಾವಣೆಗಳಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಗೆದ್ದರೆ, ಒಮ್ಮೆ 2014ರಲ್ಲಿ ಜೆಡಿಎಸ್‌ನ ಬಿ.ಬಿ. ನಿಂಗಯ್ಯ ಗೆದ್ದಿದ್ದಾರೆ. ಅಷ್ಟಾಗಿ ಬಿಜೆಪಿಯ ಹವಾ ಮೂಡಿಗೆರೆಯಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಸ್ಪರ್ಧಿಸುವುದರಿಂದ ಪ್ರಚಂಡ ಗೆಲುವು ಪಡೆಯಲು ಕಷ್ಟಕರವಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸುಮಾರು 1,45,805ಕ್ಕಿಂತಲೂ ಅಧಿಕ ಮತದಾರರಿದ್ದಾರೆ. ಮೂಡಿಗೆರೆ ಕಸಬಾ, ಗೋಣಿಬೀಡು, ಬಣಕಲ್, ಬಾಳೂರು, ಕಳಸ, ಅಂಬಳೆ, ಅವತಿ, ಆಲ್ದೂರು ಸೇರಿದಂತೆ ಎಂಟು ಹೋಬಳಿ ವ್ಯಾಪ್ತಿಯನ್ನು ಒಳಗೊಂಡಿರುವ ಮೀಸಲು ಕ್ಷೇತ್ರ ಇದಾಗಿದೆ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರ ಸಂಖ್ಯೆ ಹೆಚ್ಚು ಇದೆ. ಡಾ. ಪರಮೇಶ್ವರ್ ಸ್ಪರ್ಧೆಯಿಂದ ಪ್ರತಿಷ್ಠಿತವಾಗಲಿರುವ ಹಿನ್ನೆಲೆಯಲ್ಲಿ ಗೆಲ್ಲಲು ಬೇಕಾದ ಮತ ಪಡೆಯಲು ಅಭ್ಯಂತರವಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿದೆ.
ಕಳೆದ ಸಲ ಜೆಡಿಎಸ್‌ನ ಬಿ.ಬಿ.ನಿಂಗಯ್ಯರವರು 32,417 ಮತಗಳನ್ನು ಪಡೆಯುವ ಮೂಲಕ ಗೆಲುವು ದಕ್ಕಿಸಿಕೊಂಡಿದ್ದರು. ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ 31782 ಮತಗಳನ್ನು ಪಡೆಯುವ ಮೂಲಕ ಕೇವಲ 625 ಮತಗಳ ಅಂತರದಿಂದ ಸೋಲುಂಡಿದ್ದರು. ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ 29309 ಮತಗಳನ್ನು ಪಡೆಯುವ ಮೂಲಕ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಕಳೆದ ಮೂರು ಬಾರಿಯೂ ಕಡಿಮೆ ಅಂತರದಿಂದ ಸೋಲು ಕಾಣುತ್ತಿರುವ ಕಾಂಗ್ರೆಸ್ ಈ ಸಲ ಪ್ರಚಂಡ ಗೆಲುವು ದಕ್ಕಿಸಿಕೊಳ್ಳುವ ಕಾತುರದಲ್ಲಿದೆ.
ಮೂಡಿಗೆರೆ ಮೀಸಲು ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಕಾಂಗ್ರೆಸ್ ಶಾಸಕರು ಹೆಚ್ಚು ಬಾರಿ ಗೆದ್ದಿರುವುದು ಕಂಡು ಬರುತ್ತದೆ. 1962 ಮತ್ತು 1967ರಲ್ಲಿ ಪಿಎಸ್‌ಪಿಯ ಕೆ.ಎಚ್.ರಂಗನಾಥ್ ಶಾಸಕರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿ ಗೆದ್ದಿದ್ದರೆ, 1978ರಲ್ಲಿ ಕಾಂಗ್ರೆಸ್‌ನ ಮೋಟಮ್ಮ ಗೆದ್ದಿದ್ದರು. 1983ರಲ್ಲಿ ಪಿ.ತಿಪ್ಪಯ್ಯ ಜೆಎನ್‌ಪಿ ಪಕ್ಷದಿಂದ ಗೆದ್ದಿದ್ದರು. 1985ರಲ್ಲಿ ಜೆಎನ್‌ಪಿಯಿಂದ ಸ್ಪರ್ಧಿಸಿದ್ದ ಬಿ.ಬಿ. ನಿಂಗಯ್ಯ ಗೆಲುವು ಕಂಡಿದ್ದರು. 1989ರಲ್ಲಿ ಕಾಂಗ್ರೆಸ್‌ನ ಮೋಟಮ್ಮ ಆಯ್ಕೆಯಾಗಿದ್ದರು. 1994ರಲ್ಲಿ ಜೆಡಿಎಸ್ ಪಕ್ಷದಿಂದ 2ನೆ ಸಲ ಬಿ.ಬಿ. ನಿಂಗಯ್ಯ ಗೆದ್ದಿದ್ದರೆ, 1999ರಲ್ಲಿ ಮೂರನೆ ಬಾರಿ ಮೋಟಮ್ಮ ಗೆದ್ದಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯ ಕುಮಾರಸ್ವಾಮಿ ಸತತ ಎರಡು ಸಲ ಚುನಾಯಿತರಾಗಿದ್ದರು. 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ. ಬಿ.ನಿಂಗಯ್ಯ ಗೆದ್ದಿದ್ದರು. ಇಂತಹ ಇತಿಹಾಸ ಹೊಂದಿರುವ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಮರಳಿ ಗೆಲುವು ದಕ್ಕಿಸಿಕೊಳ್ಳುವ ಇರಾದೆ ಹೊಂದಿದೆ.
ಈ ಹಂತದಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಚರ್ಚಿಸಿ ಮಾಹಿತಿ ನೀಡಲು ಸೂಚಿಸಿರುವ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಇಂದಿನ ಬೆಳವಣಿಗೆಯಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಡಾ.ಜಿ. ಪರಮೇಶ್ವರ್ 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.







