ಜನಪರ ಕೆಲಸ ಮಾಡಲು ಮುಂದಾಗಿ: ಸಚಿವ ಕಾಗೋಡು
ಪ್ರಗತಿ ಪರಿಶೀಲನಾ ಸಭೆ

ಸೊರಬ, ಅ.9: ಅಧಿಕಾರಿಗಳು ಸಭೆಗಳಲ್ಲಿ ಜನಪರ ಕೆಲಸಗಳು ಹಾಗೂ ಅಭಿವೃದ್ಧಿ ಹಿನ್ನಡೆ ಕಥೆ ಹೇಳದೆ, ಕೆಲಸ ಮಾಡುವಲ್ಲಿ ಮುಂದಾಗಬೇಕು ಎಂಬ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಸಮಿತಿ ಅರ್ಜಿಗಳ ಕಡತಗಳನ್ನು ತಯಾರಿಸದ ಅಧಿಕಾರಿಗಳ ವಿರುದ್ಧ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರವಿವಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಅರಣ್ಯ ಹಕ್ಕು ಸಮಿತಿಯಿಂದ 22,500 ಅರ್ಜಿಗಳು ರೈತರಿಂದ ಸಲ್ಲಿಕೆಯಾಗಿವೆ. ಇವುಗಳಲ್ಲಿ ಕೇವಲ 2,929ಅರ್ಜಿಗಳ ಸರ್ವೇಕಾರ್ಯ ಮಾತ್ರ ಮುಗಿದಿದೆ. ಈ ಅರ್ಜಿಗಳನ್ನೂ ಉಪವಿಭಾಗಾಧಿಕಾರಿಗಳ ಹಂತಕ್ಕೆ ತಲುಪಿಸದಿರುವುದು ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ, ಉಳಿದ ಅರ್ಜಿಗಳನ್ನು ಸರ್ವೇಮಾಡಿ ಕಡತಗಳನ್ನು ತಯಾರಿಸಿ ಮಂಜೂರಾತಿಗಾಗಿ ತಕ್ಷಣ ಕಳುಹಿಸುವಂತೆ ನೋಡಲ್ ಅಧಿಕಾರಿ ರವಿಕುಮಾರ್ ಅವರಿಗೆ ಸೂಚಿಸಿದರು.
ತಾಲೂಕು ಗೇಣಿ ಹೋರಾಟದ ಜನ್ಮ ಭೂಮಿಯಾಗಿದ್ದು, ಬಗರ್ ಹುಕುಂ ಸಾಗುವಳಿದಾರರಿಗೆ ಇದುವರೆಗೂ ಹಕ್ಕು ಪತ್ರ ವಿತರಿಸದಿರುವುದು ನಾಚಿಕೆಗೇಡಿನ ಸಂಗತಿ. ಈ ವಿಷಯದಲ್ಲಿ ಅಧಿಕಾರಿಗಳು ಮೀನಮೇಷ ಎಣಿಸದೆ ಪ್ರತಿಯೊಬ್ಬ ಅರ್ಜಿದಾರನಿಗೂ ನ್ಯಾಯ ಒದಗಿಸಬೇಕು ಎಂದ ಅವರು, ನಮೂನೆ 53ರ ಅರ್ಜಿದಾರರಿಗೆ ಭೂಮಿ ಮಂಜೂರಾಗಿ ಎರಡು, ಮೂರು ವರ್ಷಗಳು ಕಳೆದರೂ ಹಕ್ಕು ಪತ್ರ ನೀಡದಿರುವ ಬಗ್ಗೆ ದೂರು ಬಂದಿದ್ದು ಕೂಡಲೇ ಅಂತವರಿಗೆ ಹಕ್ಕುಪತ್ರ ನೀಡಬೇಕು, ಜೊತೆಗೆ ಬಗರ್ ಹುಕುಂ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿಗಳೇ ಕಡತದಲ್ಲಿ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದ ಮಾಹಿತಿ ತಮ್ಮಗಮನಕ್ಕೆ ಬಂದಿದ್ದು, ಅರ್ಜಿದಾರರ ಹಿಂಬರಹವನ್ನು ಪರಿಗಣಿಸಿ ಅಂತವರಿಗೆ ನ್ಯಾಯ ಒದಗಿಸಬೇಕು ಎಂದು ತಹಶೀಲ್ದಾರ್ ಎಲ್.ಬಿ ಚಂದ್ರಶೇಖರ್ ಅವರಿಗೆ ಸೂಚಿಸಿದರು.
ಜಿಲ್ಲೆಯ 6 ತಾಲೂಕುಗಳು ಬರಗಾಲ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ಜನ, ಜಾನುವಾರಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಆವಶ್ಯಕತೆ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಸುವುದು, ಶಿಥಿಲಗೊಂಡ ಕೊಳವೆ ಬಾವಿ, ತೆರೆದ ಬಾವಿಗಳನ್ನು ದುರಸ್ತಿ ಪಡಿಸುವುದಕ್ಕೆ ಪೂರ್ವ ಸಿದ್ಧತೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು. ಜನರು ಗುಳೆ ಹೋಗದಂತೆ ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಮರ್ಪಕ ಕೆಲಸವನ್ನು ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಪಂ ವತಿಯಿಂದ ಪಟ್ಟಣದ ಗಡಿಯನ್ನು ಗುರುತಿಸಿ ಈ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡುವಂತೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕು. ಆಶ್ರಯ ಅರ್ಜಿದಾರರ ನಿವೇಶನಕ್ಕಾಗಿ 9.5 ಎಕರೆ ಜಮೀನು ಗುರುತಿಸಿ ಜಿಲ್ಲಾಧಿಕಾರಿಗೆ ಕಡತ ಸಲ್ಲಿಸುವಂತೆ ಮುಖ್ಯಾಧಿಕಾರಿ ಬಾಲಚಂದ್ರ ಅವರಿಗೆ ಸೂಚಿಸಿದರು.
ಬೆಳೆ ನಷ್ಟ ಪರಿಹಾರವನ್ನು ಘೋಷಿಸುವುದರ ಮುಂಚಿತವಾಗಿ ಅಧಿಕಾರಿಗಳು ಬೆಳೆಯ ಸ್ಥಳಕ್ಕೆ ಭೇಟಿ ನೀಡಿ ಪ್ರಮಾಣಿಕ ಸಮೀಕ್ಷೆ ಮಾಡಿ ವರದಿ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾಗರ ಉಪವಿಭಾಗಾಧಿಕಾರಿ ಸತೀಶ್, ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಪಂಪಂ ಮುಖ್ಯಾಧಿಕಾರಿ ಬಾಲಚಂದ್ರ, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ಎಸಿಎಫ್ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಅಜಯ್ ಕುಮಾರ್, ಕೃಷಿ ಅಧಿಕಾರಿ ಮಂಜುಳಾ, ತೋಟಗಾರಿಕಾ ಇಲಾಖೆ ಅಧಿಕಾರಿ ಸೋಮಶೇಖರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







