ಜಪಾನ್ ಓಪನ್: ಕಿರ್ಗಿಯೊಸ್‌ಗೆ ಪುರುಷರ ಸಿಂಗಲ್ಸ್ ಕಿರೀಟ

ಟೋಕಿಯೊ, ಅ.9: ಆಸ್ಟ್ರೇಲಿಯದ ಪವರ್-ಹಿಟ್ಟರ್ ನಿಕ್ ಕಿರ್ಗಿಯೊಸ್ ಬೆಲ್ಜಿಯಂನ ಡೇವಿಡ್ ಗೊಫಿನ್‌ರನ್ನು ನೇರ ಸೆಟ್‌ಗಳಿಂದ ಮಣಿಸಿ ಜಪಾನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕಿರ್ಗಿಯೊಸ್ ಅವರು ಗೊಫಿನ್‌ರನ್ನು 4-6, 6-3, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಕಿರ್ಗಿಯೊಸ್ ಪ್ರತಿ ಗಂಟೆಗೆ 220 ಕಿ.ಮೀ.ಗೂ ಅಧಿಕ ವೇಗದಲ್ಲಿ ರಾಕೆಟ್ ಸರ್ವ್ ಮಾಡಿದ್ದು, ಎದುರಾಳಿ ಗೊಫಿನ್‌ಗೆ ಲಯ ಕಂಡುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಗೊಫಿನ್ ವೇಗವಾದ ಪಾದ ಚಲನೆ ಮೂಲಕ ಕಿರ್ಗಿಯೊಸ್‌ಗೆ ಒತ್ತಡ ಹೇರಲು ಯತ್ನಿಸಿದರು.
ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ 15ನೆ ಸ್ಥಾನದಲ್ಲಿರುವ ಆಸೀಸ್‌ನ ಕಿರ್ಗಿಯೊಸ್ ಚುರುಕಾದ ಗ್ರೌಂಡ್ ಸ್ಟೋಕ್ಸ್ ಹಾಗೂ 11 ರಿಂದ 12 ಬ್ರೇಕ್ ಪಾಯಿಂಟ್ ಉಳಿಸುವ ಮೂಲಕ 2 ಗಂಟೆಗಳ ಹೋರಾಟದಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದರು.
ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಆಟಗಾರರು ಜಪಾನ್ ಓಪನ್ ಟೂರ್ನಿಯಿಂದ ಹೊರಗುಳಿದಿರುವುದು ಕಿರ್ಗಿಯೊಸ್‌ಗೆ ಈ ಋತುವಿನಲ್ಲಿ ಮೂರನೆ ಟ್ರೋಫಿ ಜಯಿಸಲು ಸಾಧ್ಯವಾಯಿತು.
ಹಾಲಿ ಚಾಂಪಿಯನ್ ಹಾಗೂ ಯುಎಸ್ ಓಪನ್ ವಿನ್ನರ್ ಸ್ಟಾನ್ ವಾವ್ರಿಂಕ ಬೆನ್ನುನೋವಿನಿಂದ ಟೂರ್ನಿಯ ನಡುವೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. 2014 ಹಾಗೂ 2012ರ ಪ್ರಶಸ್ತಿ ವಿಜೇತ ಸ್ಥಳೀಯ ಆಟಗಾರ ಕೀ ನಿಶಿಕೊರಿ ಗಾಯದ ಸಮಸ್ಯೆಯಿಂದಾಗಿ 2ನೆ ಸುತ್ತಿನ ಪಂದ್ಯದಲ್ಲೇ ಟೂರ್ನಿಯಿಂದ ಹೊರ ನಡೆದಿದ್ದರು.







