ಅಂತರ್ಜಲ ಸಂರಕ್ಷಣೆಗೆ ಎಲ್ಲರೂ ಮುಂದಾಗಲಿ
ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ರೈತ ಮುಖಂಡ ಕಡಿದಾಳ್ ಶಾಮಣ್ಣ ಕರೆ

ಚಿತ್ರದುರ್ಗ, ಅ. 9: ನಮ್ಮ ಪೂರ್ವಿಕರು ಆಗಿನ ಅವೈಜ್ಞಾನಿಕ ಯುಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದರು. ಆ ಮೂಲಕ ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಆದರೆ, ಇದೀಗ ಬೆಂಗಳೂರಿನ 350 ಕೆರೆಗಳು ಸಂಪೂರ್ಣ ನಾಶವಾಗಿದ್ದು, ಕೆರೆಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಹಿರಿಯ ರೈತ ಮುಖಂಡ ಕಡಿದಾಳ್ ಶಾಮಣ್ಣ ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ಶರಣ ಸಂಸ್ಕೃತಿ ಉತ್ಸವದ ಹಿನ್ನೆಲೆ
ಯಲ್ಲಿ ಏರ್ಪಡಿಸಿದ್ದ ಬಸವತತ್ವ ಧ್ವಜಾರೋ
ಹಣ ನೆರವೇರಿಸಿ ಮಾತನಾಡಿದ ಅವರು, ಅಂತರ್ಜಲ ಸಮರ್ಪಕ ಬಳಕೆ ಬಗ್ಗೆ ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾಗಿದೆ. ಮಾತ್ರ ವಲ್ಲ ಈ ಬಗ್ಗೆ ದೀರ್ಘ ಚರ್ಚೆಯಾಗಬೇಕಿದೆ ಎಂದರು.
ನಮ್ಮ ಪ್ರದೇಶಗಳಲ್ಲಿ ಇರುವ ಕೆರೆಗಳು ಹೇಗಿವೆ? ಅವುಗಳ ಮಧ್ಯ ನಡುಗದ್ದೆಗಳನ್ನು ಹೇಗೆ ನಿರ್ಮಿಸಬೇಕು? ಹಾಗೇನೆ ಜೀವಜಲ ಯಾರ್ಯಾರಿಗೆ ಬೇಕೆಂಬ ಚಿಂತನೆಗಳು ಆಗಬೇಕು. ನೀರು ಕೇವಲ ರೈತರಿಗಷ್ಟೇ ಅಲ್ಲ, ಪ್ರತಿಯೊಂದು ಜೀವರಾಶಿಗೂ ಅವಶ್ಯಕ ಎಂದು ಅವರು ತಿಳಿಸಿದರು.
ನಾಲೆಗಳನ್ನು ನಿರ್ಮಿಸುವುದರ ಮೂಲಕ ನೀರನ್ನು ಬಳಸಬಹುದು. ಮೊದಲು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇಂತಹ ಬಸವತತ್ವ ಪ್ರತಿಪಾದಿಸುವ ಮುರುಘಾ ಶರಣರ ಸಾನಿಧ್ಯದಲ್ಲಿ ಮಾತನಾಡಿದರೆ ಸಮಾಜಕ್ಕೆ ಸಂದೇಶ ತಲುಪಬಹುದು ಮತ್ತು ಈ ಕಾರ್ಯಕ್ಕೆ ಶುಭಾರಂಭವಾಗುವುದರಲ್ಲಿ ಮತ್ತು ಪೂರ್ಣಗೊಳ್ಳವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ರೈತರ ಸಂಘಟನೆಗೆ ಅತೀ ಹೆಚ್ಚು ಒತ್ತು ಕೊಟ್ಟವರು ಮುರುಘಾ ಶರಣರು. ಆದರೆ ಈಗ ರೈತ ಸಂಘ ಮತ್ತೆ ಹೋಳಾಗಿದೆ, ಅದನ್ನು ಶಿವಮೂರ್ತಿ ಮುರುಘಾ ಶರಣರು ಸರಿ ಪಡಿಸಬೇಕಾಗಿದೆ. ಶರಣರು ಮಾಡುವ ಸರಳ ಸಾಮೂಹಿಕ ವಿವಾಹ ನಮಗೆ ಹೆಚ್ಚು ಸಂತಸ ತಂದಿದೆ. ಇಲ್ಲಿ ಭಿನ್ನ ಸಂಸ್ಕೃತಿಯಿದೆ ಎಂದರು.
ರಸ್ತೆಗಳು ಅಗಲೀಕರಣವಾಗುವುದು ಸಂತಸ. ಆದರೆ ರಸ್ತೆಯ ಎರಡು ಬದಿಗಳಲ್ಲಿ ಗಿಡ ಮರಗಳನ್ನು ಬೆಳಸಬೇಕು. ಎನ್ನೆಸ್ಸೆಸ್ ಸೇವಾ ಸಂಸ್ಥೆಗೆ ಈ ಕೆಲಸ ನೀಡಬೇಕು. ಆಗ ಸರಿಯಾದ ಕೆಲಸವಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಕಡಿದಾಳ್ ಶಾಮಣ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘ ಶರಣರು, ಬ್ರಹ್ಮನಂದಾಶ್ರಮದ ಗುರು ಸಿದ್ದೇಶ್ವರ ಸ್ವಾಮಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮಿ, ಖ್ಯಾತ ವೈದ್ಯ ಡಾ.ಮಹೇಶ ನಾಲವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







