‘ಭೂಗಳ್ಳರು ಕಬಳಿಸಿದ ಜಮೀನನನ್ನು ಉಳಿಸಿದ ಹೋರಾಟ’ ಕೃತಿ ಲೋಕಾರ್ಪಣೆ
ಭೂ ಮಾಫಿಯಾ ವಿರುದ್ಧಜನತೆ ಸಿಡಿದೇಳಬೇಕು: ಚಿರಂಜೀವಿ ಸಿಂಗ್
ಬೆಂಗಳೂರು, ಅ. 9: ರಾಜ್ಯದಲ್ಲಿನ ಭೂ ಮಾಫಿಯಾ ವಿರುದ್ಧ ಜನರು ಸಿಡಿದೇಳುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸಬೇಕು ಎಂದು ನಿವೃತ್ತ ಐಎಎಸ್ ಅಕಾರಿ ಚಿರಂಜೀವಿ ಸಿಂಗ್ ಹೇಳಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು ವಿಚಾರ ವೇದಿಕೆ ಮತ್ತು ಂ.ಚಂದ್ರಶೇಖರ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ‘ಭೂಗಳ್ಳರು ಕಬಳಿಸಿದ ಜಮೀನನನ್ನು ಳಿಸಿದ ಹೋರಾಟ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದಲ್ಲಿ ಸರಕಾರಿ ಭೂಮಿಯನ್ನು ಕಬಳಿಕೆ ಮಾಡಲಾಗಿದೆ. ಈ ಪ್ರಮಾಣದ ಭ್ರಷ್ಟಾಚಾರ ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಇಲ್ಲ. ಸರಕಾರದ ಭೂಮಿಯನ್ನು ನುಂಗುತ್ತಿರುವ ಭೂಗಳ್ಳರ ವಿರುದ್ಧ ಜನರು ಹೋರಾಟಕ್ಕಿಳಿಯಬೇಕು ಎಂದು ಹೇಳಿದರು.
ಭೂ ಕಬಳಿಕೆ ವಿರುದ್ಧ ನಡೆಸಿದ 39ದಿನಗಳ ಅವಿರತ ಹೋರಾಟವನ್ನು ದೊರೆಸ್ವಾಮಿ ಈ ಕೃತಿಯಲ್ಲಿ ವಿವರಿಸಿದ್ದಾರೆ. ಈ ಕೃತಿಯನ್ನು ಓದುತ್ತಿದ್ದರೆ ನಮ್ಮಲ್ಲಿ ಗಂಭೀರ ಹಾಗೂ ಆಳವಾದ ಪ್ರಶ್ನೆಗಳನ್ನು ಮೂಡಿಸುತ್ತದೆ. ಬಡವರಿಗೆ ಭಿಕ್ಷೆ ಶ್ರೀಮಂತರಿಗೆ ಶ್ರೀರಕ್ಷೆ ಎಂಬ ಪರಿಸ್ಥಿತಿ ರಾಜ್ಯದಲ್ಲಿದೆ. ಭೂಕಬಳಿಕೆಯಲ್ಲಿ ಭಾಗಿಯಾಗಿರುವ ಸರಕಾರಿ ಅಕಾರಿಗಳು, ರಾಜಕಾರಣಿಗಳ ಹೆಸರನ್ನು ಬಹಿರಂಗಗೊಳಿಸಿದ್ದಾರೆಂದು ತಿಳಿಸಿದರು.
ಭೂ ಕಬಳಿಕೆಗೆ ಕಡಿವಾಣ ಹಾಕುವಲ್ಲಿ ಯಾವುದೇ ಸರಕಾರವೂ ಆಸಕ್ತಿವಹಿಸಿಲ್ಲ. ಹೀಗಾಗಿಯೇ ರಾಜ್ಯದಲ್ಲಿ ಈ ದುಸ್ಥಿತಿ ಬಂದಿದೆ. ಸರಕಾರಗಳು ಜನರ ವಿಶ್ವಾಸವನ್ನು ಕಳೆದುಕೊಂಡಿವೆ. ರಾಜ್ಯದಲ್ಲಿ ಭ್ರಷ್ಟಾಚಾರದ ಕರಾಳ ಮುಖ ಗೋಚರಿಸುತ್ತಿದ್ದು, ಸರಕಾರವೂ ಅದರ ಪ್ರತಿಬಿಂಬ. ಆದರೆ ಸರಕಾರವೇ ಭೂ ಕಬಳಿಕೆಯಲ್ಲ್ಲಿ ತೊಡಗಿದ್ದರೆ ಸಮಾಜದ ಗತಿಯೇನು, ಮುಂದಿನ ಭವಿಷ್ಯವೇನು ಎಂದು ಪ್ರಶ್ನಿಸಿದರು.
ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ದೊರೆಸ್ವಾಮಿ ರಚಿಸಿರುವ ಕೃತಿಯನ್ನು ಓದಿದರೆ ಈಗಿನ ಭ್ರಷ್ಟಾಚಾರದ ಹೋರಾಟಕ್ಕಿಂತ ಬ್ರಿಟಿಷರ ವಿರುದ್ಧದ ಹೋರಾಟವೇ ಲೇಸು ಎಂದು ಅನಿಸುತ್ತದೆ. ಭೂ ಕಬಳಿಕೆ ವಿರುದ್ಧ ನಡೆಸಿರುವತಮ್ಮ ಹೋರಾಟವನ್ನು ವೈಭವಿಕರಿಸದೇ ಇಂದಿನ ಭ್ರಷ್ಟಾಚಾರದ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಏಳು ದಶಕಗಳಲ್ಲಿ ನಡೆದಿರುವ ಭೂ ಕಬಳಿಕೆಯ ಸಂಪೂರ್ಣ ವಿವರವನ್ನು ಜನರ ಮುಂದೆ ಇಟ್ಟಿದ್ದಾರೆ.ಭ್ರಷ್ಟಾಚಾರದ ಹೆಜ್ಜೇನಿನ ಗೂಡಿಗೆ ಕೈ ಹಾಕಿರುವ ದೊರೆಸ್ವಾಮಿ ಹೋರಾಟಕ್ಕೆ ನಾವೆಲ್ಲ್ಲರೂ ಕೈಜೋಡಿಸಬೇಕು ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಬ್ರಹ್ಮ ವಿದ್ಯಾ ಮಂದಿರದ ಮಾತಾ ಚನ್ನಮ್ಮ ಹಳ್ಳಿಕೇರಿ, ಸ್ವಾತಂತ್ರ ಯೋಧ ಸೋಮಲಿಂಗ ಅಪ್ಪಣ್ಣಾ ಮಳಗಲಿ, ಪ್ರೊ.ಎಸ್.ಕೃಷ್ಣಸ್ವಾಮಿ, ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಎನ್.ಆರ್.ಮಠದ್, ನಾಟಕಕಾರ ಸಿ.ಲಕ್ಷ್ಮಣ್, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ನ್ಯಾ.ಎನ್.ಡಿ.ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು. ಕುವೆಂಪು ವಿಚಾರ ವೇದಿಕೆಯ ಅಧ್ಯಕ್ಷ ನಿವೃತ್ತ ನ್ಯಾ. ಎ.ಜೆ ಸದಾಶಿವ, ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.





