ಬ್ಯಾರಿ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮ ನಿರಂತರವಾಗಿ ನಡೆಯಲಿ: ಹರೇಕಳ ಹಾಜಬ್ಬ
ನ್ಯೂಪಡ್ಪು ಸರಕಾರಿ ಶಾಲೆಯಲ್ಲಿ ಮೇಲ್ತೆನೆಯಿಂದ ‘ಬ್ಯಾರಿ ಸಾಹಿತ್ಯ ಕೂಟ’

ಕೊಣಾಜೆ, ಅ.11: ಬ್ಯಾರಿ ಭಾಷೆಯ ಉಳಿವು, ಬೆಳವಣಿಗೆ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ನಡೆಯಬೇಕಾಗಿದೆ. ಬ್ಯಾರಿ ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸದೆ ಎಲ್ಲರೂ ಒಟ್ಟಾಗಿ ಅದರ ಇನ್ನಷ್ಟು ಬೆಳವಣಿಗೆಗೆ ಪ್ರೋತ್ಸಾಹಿಸಿ ಎಂದು ಅಕ್ಷರ ಸಂತ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ‘ಮೇಲ್ತೆನೆ’ (ಬ್ಯಾರಿ ಬರಹಗಾರರು ಮತ್ತು ಕಲಾವಿದರ ಕೂಟ) ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ‘ಬ್ಯಾರಿ ಸಾಹಿತ್ಯ ಕೂಟ’ ಉದ್ಘಾಟಿಸಿ ಅವರು ಮಾತನಾಡಿದರು.
ಹಾಜಬ್ಬ ಎನ್ನುವ ಬ್ಯಾರಿ ಸಮುದಾಯದ ವ್ಯಕ್ತಿ ಇಂದು ವಿವಿಧ ಕಾರ್ಯಕ್ರಮ ಉದ್ಘಾಟನೆ ಮಾಡುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೊಡ್ಡವರ ಜೊತೆ ಕುಳಿತುಕೊಳ್ಳುವಂತಾಗುವಲ್ಲಿ ದೇವನ ದಯೆ, ಮಾಧ್ಯಮಗಳ ಸಹಕಾರ ಕಾರಣ. ಇಂತಹ ಸಹಕಾರ ಮುಂದುವರಿಯಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೆಲ್ತೆನೆ ಅಧ್ಯಕ್ಷ ಆಲಿಕುಂಞಿ ಪಾರೆ ಮಾತನಾಡಿ, ಭಾಷೆ ಎನ್ನುವುದು ನಮ್ಮ ಮನದ ಭಾವನೆಯನ್ನು ಇನ್ನೊಬ್ಬರ ಜೊತೆ ಪರಸ್ಪರ ಹಂಚಿಕೊಳ್ಳುವ ಮಾಧ್ಯಮ. ಎಲ್ಲಾ ಭಾಷೆಗಳನ್ನು ಕಲಿಯಬೇಕಿದ್ದು, ಮಾತೃಭಾಷೆಯ ಬಗ್ಗೆ ಹೆಚ್ಚಿನ ಒಲವು ಹೊಂದಿ ಇತರರಿಗೂ ಕಲಿಸುವ ಮೂಲಕ ಸಂಸ್ಕೃತಿ ಉಳಿಸಬೇಕು. ವಿದ್ಯಾರ್ಥಿಗಳು ಪದವಿ ಪಡೆದರೂ ಸಾಮಾನ್ಯ ಜ್ಞಾನವಿಲ್ಲದಿದ್ದರೆ ಏನನ್ನೂ ಸಾಧಿಸಲಾಗದು ಎಂದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷೆ ಓದುವ, ಬ್ಯಾರಿ ಕ್ವಿಝ್ ಸ್ಪರ್ಧೆ ನಡೆಯಿತು. ಕವಿ, ಗಾಯಕ ಬಶೀರ್ ಅಹ್ಮದ್ ಕಿನ್ಯ ಅಧ್ಯಕ್ಷತೆಯಲ್ಲಿ ನಡೆದ ಬ್ಯಾರಿ ಕವಿಗೋಷ್ಠಿಯಲ್ಲಿ ಕವಿಗಳಾದ ಹಿರಿಯ ಎಚ್.ಆರ್.ಅರ್ಕುಳ, ಯುವ ಕವಿಗಳಾದ ನಿಝಾಮ್ ಕೊಳಂಬೆ, ಹಸನ್ ಸಫ್ವಾನ್ ಬಡಗನ್ನೂರು, ನಾಸಿರ್ ಸಜಿಪ, ಎಂ.ಎಂ.ಆತೂರು, ಸಲೀಂ ಮಾಣಿ, ಖ-ಶಿಖ ಕಲಂದರ್ ಬಜ್ಪೆ, ಎಡ್ವರ್ಡ್ ಡಿಸೋಜ ಮೊದಲಾದವರು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಹಂಝ ಮಲಾರ್, ಇಸ್ಮತ್ ಪಜೀರ್ ಹಾಗೂ ಇಸ್ಮಾಯಿಲ್ ಮಾಸ್ಟರ್ ಅವರನ್ನು ಗೌರವಿಸಲಾಯಿತು. ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು, ಶಾಲೆಯ ಅಡುಗೆ ಸಿಬ್ಬಂದಿ ಶಂಕರ ಉಪಸ್ಥಿತರಿದ್ದರು. ಮೇಲ್ತೆನೆ ಪದಾಧಿಕಾರಿಗಳಾದ ಅನ್ಸಾರ್ ಇನೋಳಿ ಹಾಗೂ ಬಶೀರ್ ಕಲ್ಕಟ್ಟ ತೀರ್ಪುಗಾರರಾಗಿದ್ದರು.
ಮೇಲ್ತೆನೆ ಉಪಾಧ್ಯಕ್ಷ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿದರು. ಕೈಸ್ ಅಬ್ಬಾಸ್ ಕಿರಾಅತ್ ಓದಿದರು. ಪ್ರಧಾನ ಕಾರ್ಯದರ್ಶಿ ಇಸ್ಮತ್ ಪಜೀರ್ ಬ್ಯಾರಿ ಕ್ವಿಝ್ ನಡೆಸಿಕೊಟ್ಟರು. ಸಂಚಾಲಕ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.







