ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಿನಂಗಡಿ,ಅ.11: ಮುಂಬರುವ ನ.5ರಂದು ಉಪ್ಪಿನಂಗಡಿಯಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸಾಹಿತಿ ಪ್ರೊ.ವಿ.ಬಿ. ಅತ್ರಿಕಜೆ ಬಿಡುಗಡೆಗೊಳಿಸಿದರು.
ಇಲ್ಲಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ ಆಸಕ್ತಿಯನ್ನು ಅರಳಿಸುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಪರಿಣಾಮಕಾರಿಯಾಗಬೇಕಾಗಿವೆ. ಹಿರಿಯರ ಜೊತೆಗೆ ಕಿರಿಯರ ಮನಸ್ಸುಗಳು ಕನ್ನಡ ಸಾಹಿತ್ಯದ ಕಡೆಗೆ ಓಗೊಡುತ್ತಾ ಬರಬೇಕಾದ ಪೂರಕ ಸ್ಥಿತಿಯನ್ನು ನಿರ್ಮಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲೇ ಪ್ರಪ್ರಥಮವೆಂಬಂತೆ ಈ ಬಾರಿ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನವು ಯುವ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ನಡೆದು ಎಳೆ ಮಕ್ಕಳ ಮನದಲ್ಲೂ ಸಾಹಿತ್ಯದ ಕಂಪನ್ನು ಸೂಸುವಂತಿರಬೇಕಾಗಿದೆ. ಆ ದೃಷ್ಠಿಯಲ್ಲಿ ಶ್ರಮಿಸುತ್ತಿರುವ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕಿ ರವರ ಶ್ರಮ ಫಲಪ್ರದವಾಗಲಿ ಎಂದು ಹಾರೈಸಿದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಧನ್ಯ ಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ಎಲ್ಲರು ಏಕ ಭಾವದಿಂದ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆ ಮಾಡಲು ಮುಂದಾಗಿರುವುದು ಸಂತಸ ತಂದಿದೆ. ಕನ್ನಡ ಸಾಹಿತ್ಯದ ಸವಿ ಎಲ್ಲೆಡೆ ಪ್ರಸಹರಿಸಲು ಪ್ರತಿಯೋರ್ವ ಕನ್ನಡಿಗರೂ ಶ್ರಮಿಸಬೇಕಾದ ಕಾಲ ಇದಾಗಿದೆ ಎಂದರು.
ಸಭೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಸಮ್ಮೇಳನದ ಯಶಸ್ಸಿಗೆ ಸಲಹೆ ಸೂಚನೆಗಳನ್ನಿತ್ತರು. ಸಭೆಯಲ್ಲಿ ಮುಂದಾಳುಗಳಾದ ಹರಿನಾರಾಯಣ ಮಾಡವು, ರವೀಂದ್ರ ದರ್ಬೆ, ಹೆಚ್.ಜಿ. ಶ್ರೀಧರ್, ಅಲಿಮಾರ ರಘುನಾಥ ರೈ, ಕರುಣಾಕರ ಸುವರ್ಣ, ಮೊಯ್ದಿನ್ ಕುಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಕಲ್ಲಳಿಕೆ, ರಾಮಚಂದ್ರ ಮಣಿಯಾಣಿ, ಜಯಂತ ಪುರೋಳಿ, ಜಗದೀಶ್ ಶೆಟ್ಟಿ, ಐ. ಚಂದ್ರಶೇಖರ್ ನಾಯಕ್, ಡಾ. ಗೋವಿಂದ ಪ್ರಸಾದ್ ಕಜೆ, ಪುಷ್ಪಲತಾ ತಿಲಕ್, ಪುಷ್ಪ್ಷಾವತಿ, ಹರಿಣಾಕ್ಷಿ, ವಂದನಾ, ರವೀಂದ್ರ ವಿದ್ಯಾನಗರ, ಮೊದಲಾದವರು ಭಾಗವಹಿಸಿದ್ದರು.







