ಡಾ.ಬಿ.ಎಂ.ಹೆಗ್ಡೆಗೆ ‘ಡಾ.ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ

ಕೋಟ, ಅ.11: ಕಾರಂತರು ಅದ್ಬುತ ವ್ಯಕ್ತಿ ಹಾಗೂ ಶಕ್ತಿಯಾಗಿದ್ದರು. ಈ ಲೋಕ ನಡೆಯುವುದೂ ಸಹ ಇಂತ ಶಕ್ತಿಯಿಂದಲೇ. ನಾವೆಲ್ಲ ಒಂದೇ ಎನ್ನುವ ಭಾವನೆ ಇದ್ದಲ್ಲಿ ಮಾತ್ರ ಸಮಾಜ ಹಾಗೂ ಲೋಕದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಖ್ಯಾತ ವೈದ್ಯ ಹಾಗೂ ಚಿಂತಕ ಡಾ.ಬಿ.ಎಂ.ಹೆಗ್ಡೆ ಹೇಳಿದ್ದಾರೆ.
ಕೋಟದಲ್ಲಿರುವ ಕಾರಂತ ಥೀಮ್‌ಪಾರ್ಕ್‌ನಲ್ಲಿ ಸೋಮವಾರ ಕೋಟತಟ್ಟು ಗ್ರಾಪಂ ಸಾರಥ್ಯದಲ್ಲಿ ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಸಂದರ್ಭದಲ್ಲಿ ನೀಡಲಾದ ‘ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಹಳೆಯ ಕಾಲದ ವಿಜ್ಞಾನ ಇಂದು ಹೋಗಿ ಪಾಶ್ಚಾತ್ಯ ವಿಜ್ಞಾನ ಬಂದಿರು ವುದರಿಂದ ಹೆತ್ತವರನ್ನೇ ದೂರ ಮಾಡಿ ಅಪಾರ್ಟ್‌ಮೆಂಟ್‌ನಲ್ಲಿ ಬಾಳಿ ಬದುಕುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಂಡಿದ್ದೇವೆ. ಇದನ್ನು ಬಿಟ್ಟು ಜೀವನ ದಲ್ಲಿ ಧ್ಯೇಯವನ್ನು ಬೆಳೆಸಿಕೊಂಡು ಪರೋಪಕಾರಿಯಾಗಿ ಜೀವನ ನಡೆಸಿದಲ್ಲಿ ಉತ್ತಮ ಎಂದು ಒಳ್ಳೆಯ ಬರಹಗಾರರೂ ಆಗಿರುವ ಡಾ. ಹೆಗ್ಡೆ ಅಭಿಪ್ರಾಯ ಪಟ್ಟರು.
ಕಾರಂತರ ಅಭಿಮಾನಿಗಳು ಅವರ ಹುಟ್ಟೂರಿನಲ್ಲಿ ಡಾ.ಕಾರಂತರನ್ನು ಇಂದಿಗೂ ಜೀವಂತವಾಗಿರಿಸಿರುವುದು ಶ್ಲಾಘನೀಯ ಎಂದವರು ನುಡಿದರು.
ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿ ದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕಾರ್ತಿಕ್ ಆಚಾರ್ ಎಲ್ಲರಂತಲ್ಲ ನನ್ನ ಕಾರಂತ ವಿಷಯದ ಬಗ್ಗೆ ಮಾತನಾಡಿದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಕೋಟತಟ್ಟು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಂದಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಮತ್ತು ಉಷಾ ಕಾರ್ಯಕ್ರಮ ನಿರೂಪಿಸಿದರು.







