ಭೂಮಿ ದಲಿತರ ತುರ್ತು ಅಗತ್ಯ: ಜಿಗ್ನೇಶ್ ಮೆವಾನಿ
.jpg)
ಬೆಂಗಳೂರು, ಅ. 11: ಭೂಮಿ ಕೇವಲ ಮಣ್ಣಿನ ಪ್ರಶ್ನೆ ಮಾತ್ರವಲ್ಲ, ಅದು ಒಂದು ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಪ್ರಶ್ನೆ ಆಗಿರುವ ಕಾರಣ, ಭೂಮಿ ಇಂದು ದಲಿತರಿಗೆ ತುರ್ತಾಗಿ ಬೇಕಾಗಿದೆ ಎಂದು ಉನಾ ದಲಿತ್ ಅತ್ಯಾಚಾರ್ ಲಡ್ತಾ ಸಮಿತಿ ನಾಯಕ ಜಿಗ್ನೇಶ್ ಮೆವಾನಿ ಇಂದಿಲ್ಲಿ ಹೇಳಿದ್ದಾರೆ.
ನಗರದ ಲ್ಯಾಂಗ್‌ಫೋರ್ಡ್ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಯೋಜಿಸಿದ್ದ, 'ಜಿಗ್ನೇಶ್ ಮೆವಾನಿ ಜೊತೆ ಒಂದು ಸಂವಾದ'ದಲ್ಲಿ ಪಾಲ್ಗೊಂಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭೂಮಿ ಹಕ್ಕಿನ ಪ್ರಶ್ನೆ ಏನೊ ಸರಿ. ಆದರೆ ಇಂದು ಕೃಷಿ ವಲಯ ಬಿಕಟ್ಟಿನಲ್ಲಿದೆ ಅಲ್ಲವೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಗ್ನೇಶ್, ನನ್ನ ಹೋರಾಟ ಶುರುವಾಗಿದ್ದೆ, ರೈತರ ಆತ್ಮಹತ್ಯೆಯ ವಿಷಯವಾಗಿ. ರೈತರ ಸ್ಥಿತಿ ಕೆಟ್ಟದಾಗಿ ಇರುವುದೇನೋ ನಿಜ. ಆದರೆ, ಏನೂ ಇಲ್ಲದ ಜನರು ಇಂದು ಅತ್ಯಂತ ಹೀನ ಸ್ಥಿತಿಯಲ್ಲಿದ್ದಾರೆ. ಭೂಮಿ ಎನ್ನುವುದು ಒಂದು ಸ್ವಾಭಿಮಾನದ ಪ್ರಶ್ನೆ. ಅಲ್ಲದೆ, ಭೂಮಿ ಇರುವ ದಲಿತರ ಮಕ್ಕಳು ಕೂಲಿಗೆ ಹೋಗುವುದನ್ನು ತಪ್ಪಿಸುವ ಜೊತೆಗೆ ವಿದ್ಯೆ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ, ಭೂಮಿ ಕೇವಲ ಮಣ್ಣಿನ ಪ್ರಶ್ನೆ ಅಲ್ಲ, ಭೂಮಿ ಒಂದು ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಪ್ರಶ್ನೆ ಆಗಿರುವ ಕಾರಣ ಭೂಮಿ ಇಂದು ದಲಿತರಿಗೆ ತುರ್ತಾಗಿ ಬೇಕಾಗಿದೆ ಎಂದರು.
ಸಮತವಾದ ಸಾಧಿಸಲು ಒಂದು ವಾದದಿಂದ ಸಾಧ್ಯವೇ? ಇಲ್ಲವಾದರೆ ಸಮಾನತೆ ಸಾಧಿಸಲು ಯಾವ ಯಾವ ವಾದ ಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಂಬೇಡ್ಕರ್ ವಾದದಲ್ಲಿ ನಂಬಿಕೆಯಿಟ್ಟವನು. ಅಂಬೇಡ್ಕರ್ ಅವರ ಜಾತಿವಿನಾಶ ಅತ್ಯಂತ ಮುಖ್ಯವಾದದ್ದು ಹಾಗೂ ಜಾತಿ ನಿರ್ಮೂಲನೆಗೆ ಜೈ ಭೀಮ್ ಎಂದು ಘೋಷಣೆ ಕೂಗುವವರನ್ನು ನಾವು ಬೆಂಬಲ ನೀಡುತ್ತೇವೆ. ಅದೇ ರೀತಿ, ಎಡಪಂಥೀಯರು, ವಿಮೋಚನೆಗಾಗಿ ವಿಶ್ವ ಕಾರ್ಮಿಕರೇ ಒಂದಾಗಿ ಎಂದರೆ ಅದಕ್ಕೆ ನಾವು ಬೆಂಬಲಿಸಬೇಕು ಎಂದು ಹೇಳಿದರು.
ಸಮಾನತೆಯ ಸಾಧನೆಗಾಗಿ ಗಂಭೀರವಾಗಿರುವ ಮಹಿಳಾವಾದ, ಸರ್ವೋದಯ ಎಲ್ಲವನ್ನು ಒಳಗೂಳ್ಳಬೇಕು ಅಥವಾ ಇನ್ನೊಂದು ಹೊಸ ಸಿದ್ಧಾಂತವು ಹುಟ್ಟಿದರೂ ಅದನ್ನು ಒಪ್ಪಿಕೊಳ್ಳಬೇಕು ಎಂದ ಹೇಳಿದರು.







