ನೀರೆಂದು ಆಸಿಡ್ ಕುಡಿದ ನಾಲ್ಕರ ಪೋರ !
ಮತ್ತೇನಾಯಿತು ನೋಡಿ

ಮುಂಬೈ,ಅ. 11: ನೀರು ಎಂದೆಣಿಸಿ ಆರು ತಿಂಗಳ ಹಿಂದೆ ಪ್ರಬಲ ಗಂಧಕಾಮ್ಲ (ಸಲ್ಫ್ಯೂರಿಕ್ ಆಸಿಡ್) ಕುಡಿದಿದ್ದ ನಾಲ್ಕೂವರೆ ವರ್ಷದ ಪೋರನ ಆರೋಗ್ಯ ಸ್ಥಿತಿ ಈಗ ಸಹಜವಾಗಿದೆ. ಮುಂಬೈನ ಮೀರಾ ರೋಡ್‌ನ ಈ ಬಾಲಕ ಇದೀಗ ಬರ್ಗರ್ ಹಾಗೂ ಫಿಜ್ಜಾ ಸೇವಿಸುವ ಮಟ್ಟಕ್ಕೆ ಸುಧಾರಿಸಿದ್ದಾನೆ.
ಕಿಂಡರ್‌ಗಾರ್ಟೆನ್ ವಿದ್ಯಾರ್ಥಿ ರಾಜವೀರ್ ಕನೋಜಾ, ಕಳೆದ ಏಪ್ರಿಲ್ ರಜೆಯಲ್ಲಿ ತನ್ನ ತಂದೆ- ತಾಯಿ ಹಾಗೂ ಅಕ್ಕನೊಂದಿಗೆ ಪ್ರವಾಸ ಹೊರಡಲು ಸಜ್ಜಾಗಿದ್ದ. ಕಾರು ಚಾಲಕರಾಗಿರುವ ತಂದೆ ಸನ್ನಿ, ಕಾರಿನ ಬ್ಯಾಟರಿ ಸ್ಟಾರ್ಟ್ ಆಗಲು ಕಾಯುತ್ತಿದ್ದರು. ಅವರು ಒಂದು ಪ್ಲಾಸ್ಟಿಕ್ ಬಾಟಲಿಯನ್ನು ಗಂಧಕಾಮ್ಲವನ್ನು ಮೇಜಿನ ಮೇಲೆ ಇಟ್ಟಿದ್ದರು. ಇದನ್ನು ನೀರು ಎಂದೆಣಿಸಿದ ಬಾಲಕ ಸುಮಾರು 15 ಮಿಲಿಲೀಟರ್‌ನಷ್ಟ ಆಸಿಡ್ ಕುಡಿದಿದ್ದ. "ಹೊಟ್ಟೆ ಮತ್ತು ಆಹಾರ ನಾಳಕ್ಕೆ ತೀವ್ರ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಬಾಲಕನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನ ಜೀವಕ್ಕೆ ಆಗ ಅಪಾಯ ಎದುರಾಗಿತ್ತು" ಎಂದು ವಕಾರ್ಡ್ ಆಸ್ಪತ್ರೆಯ ಮಕ್ಕಳ ಗ್ಯಾಸ್ಟ್ರೊ ಎಂಟೆರೊಲಾಜಿಸ್ಟ್ ತಜ್ಞ ವೈದ್ಯ ಡಾ.ಲಲಿತ್ ವರ್ಮಾ ನೆನಪಿಸಿಕೊಳ್ಳುತ್ತಾರೆ.
ನಾಲ್ಕು ಎಂಡೋಸ್ಕೋಪಿ ಮಾಡಿದ ಬಳಿಕ, ಹಲವು ತಿಂಗಳುಗಳ ಕಾಲ ಬಾಲಕನಿಗೆ ಬಾಯಿಯಿಂದ ಏನನ್ನೂ ತಿನ್ನಲು ಅವಕಾಶ ನೀಡಿರಲಿಲ್ಲ. ಇದೀಗ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದು, ನೃತ್ಯ ಸಹಿತ ಮಾಡುತ್ತಾನೆ. ಶಾಲೆಗೂ ಹೋಗುತ್ತಿದ್ದಾನೆ ಎಂದು ತಾಯಿ ಆಶಾ ವಿವರಿಸಿದ್ದಾರೆ.
ಆಸಿಡ್ ಕುಡಿದ ಬಳಿಕ ಬಾಲಕ ಕಫ ಹಾಗೂ ರಕ್ತ ಕಾರುತ್ತಿದ್ದ. ಬಾಲಕ ಆಸಿಡ್ ಕುಡಿಯುತ್ತಿದ್ದುದನ್ನು ನೋಡಿದ ತಂದೆ ತಕ್ಷಣ ಬಾಟಲಿ ಎಳೆದುಕೊಂಡಿದ್ದರು. ಅದೃಷ್ಟವಶಾತ್ ಉಸಿರಾಟ ನಳಿಕೆಗೆ ಯಾವ ತೊಂದರೆಯೂ ಆಗಿರಲಿಲ್ಲ. ಎರಡು ವಾರಗಳ ಹಿಂದೆ ಬಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಘೋಷಿಸಿದ ವೈದ್ಯರು, ಘನ ಆಹಾರ ತೆಗೆದುಕೊಳ್ಳಲು ಅನುಮತಿ ನೀಡಿದ್ದರು. ಬಾಲಕ ಇದೀಗ ಅನ್ನ, ಸಾರು, ಚಪಾತಿ, ಫಿಜ್ಜಾ ಕೂಡಾ ತಿನ್ನುತ್ತಿದ್ದಾನೆ ಎಂದು ವರ್ಮಾ ಹೇಳಿದ್ದಾರೆ.







