ಭಾರತದ ಇನ್ನೂ 50 ಜಿಲ್ಲೆಗಳನ್ನು ಕಣ್ಣುಪರೆ ಮುಕ್ತಗೊಳಿಸಲು ಎನ್‌ಜಿಒ ಗುರಿ

ಹೊಸದಿಲ್ಲಿ, ಅ.11: ಮುಂದಿನ 2020ರೊಳಗೆ ಭಾರತದ ಇನ್ನೂ 50 ಜಿಲ್ಲೆಗಳನ್ನು ಕಣ್ಣಿನ ಪರೆ ಮುಕ್ತ ಜಿಲ್ಲೆಗಳನ್ನಾಗಿಸಲು 10 ಕೋಟಿ ಡಾಲರ್ (ರೂ. 660 ಕೋಟಿಗೂ ಹೆಚ್ಚು) ಹೂಡಿಕೆ ಮಾಡಲು ಲಾಭ ರಹಿತ ಸಾಮಾಜಿಕ ಸಂಸ್ಥೆ ‘ಹೆಲ್ಪ್ ಮಿ ಸೀ’ ಯೋಜನೆ ಹಾಕಿಕೊಂಡಿದೆ.
ಇದಕ್ಕಾಗಿ ಸಂಸ್ಥೆಯು, ಆರಿಸಿಕೊಂಡಿರುವ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ರಾಯಗಡ ಹಾಗೂ ಜಲಗಾಂವ್, ಕನಾರ್ಟಕದ ಬೀದರ್, ಉತ್ತರಪ್ರದೇಶದ ಮಥುರಾ, ಮೊರಾದಾಬಾದ್, ಸೀತಾಪುರ ಹಾಗೂ ಹರ್ದೋಯಿ, ಬಿಹಾರದ ಪುನಿಯಾ, ಸೀತಾಮರಿ ಹಾಗೂ ಬಂದಾ ಜಿಲ್ಲೆಗಳು ಸೇರಿವೆ.
ಅದು ಈಗಾಗಲೇ, ಉತ್ತರಪ್ರದೇಶದ ಬಂದಾ, ಚಿತ್ರಕೂಟ ಹಾಗೂ ಹಮೀರ್‌ಪುರ, ಮಧ್ಯಪ್ರದೇಶದ ಸಾತ್ನಾ ಹಾಗೂ ಪನ್ನಾ ಜಿಲ್ಲೆಗಳನ್ನು ಕಣ್ಣುಪರೆ ಮುಕ್ತ ಜಿಲ್ಲೆಗಳನ್ನಾಗಿ ಮಾಡಿದೆ.
ಭಾರತದ 50 ಜಿಲ್ಲೆಗಳಲ್ಲಿ ಕಣ್ಣುಪರೆ ಮುಕ್ತ ಜಿಲ್ಲೆಗಳಾಗಿಸಲು 10 ಕೋಟಿ ಡಾಲರ್ ಬಂಡವಾಳ ಬೇಕಾಗುತ್ತದೆ. ನಿಧಿ ಎತ್ತುವಳಿಗಾಗಿ ತಾವು ದೇಶ-ವಿದೇಶಗಳಲ್ಲಿ ಸಂಗೀತ ಕಚೇರಿಗಳ ಪ್ರಾಯೋಜನೆ, ಹಲವು ಕಾರ್ಪೊರೇಟ್‌ಗಳೊಂದಿಗೆ ಸಭೆಗಳನ್ನು ನಡೆಸಲಿದ್ದೇವೆಂದು ‘ಹೆಲ್ಪ್ ಮಿ ಸೀ’ಯ ಅಧ್ಯಕ್ಷ ಹಾಗೂ ಸಿಇಒ ಜೇಕಬ್ ಮೋಹನ್ ತಝುತು ಪಿಟಿಐಗೆ ತಿಳಿಸಿದ್ದಾರೆ.







