ಕುಸ್ತಿ ಕಣದ ರಿಯಲ್ ಸುಲ್ತಾನ್ ನೇಹಾ ತೋಮರ್
ಪುರುಷ ಚಾಂಪಿಯನ್‌ಗೆ ಮಣ್ಣು ಮುಕ್ಕಿಸಿದ ಧೀರೆ

ಬರೇಲಿ, ಅ.11: ಇಲ್ಲಿ ನಡೆದ ಸ್ಪರ್ಧೆಯಲ್ಲಿ ಹದಿನೆಂಟರ ಹರೆಯದ ಡೆಹ್ರಾಡುನ್‌ನ ಮಹಿಳಾ ಕುಸ್ತಿಪಟು ನೇಹಾ ತೋಮರ್ ಅವರು ಕೇವಲ ಐದು ನಿಮಿಷದ ಅವಧಿಯಲ್ಲಿ ಪುರುಷ ಕುಸ್ತಿಪಟು ನವಾಬ್‌ನನ್ನು ಮಣ್ಣು ಮುಕ್ಕಿಸಿ , ಕುಸ್ತಿ ಅಖಾಡದಲ್ಲಿ ನಿಜವಾದ ‘ಸುಲ್ತಾನ್’ ಎನಿಸಿಕೊಂಡಿದ್ದಾರೆ.
ಲಕ್ನೋದ ಪುರುಷ ಕುಸ್ತಿ ಚಾಂಪಿಯನ್ ನವಾಬ್‌ರನ್ನು ಸೋಮವಾರ ಸಂಜೆ ನಾಲ್ಕು ಸಾವಿರ ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ನೇಹಾ ತೋಮರ್ ಮಣಿಸಿ ತನ್ನ ಶಕ್ತಿ ಸಾಮರ್ಥ್ಯವನ್ನು ತೋರಿಸಿಕೊಟ್ಟರು.
ಇಲ್ಲಿ ಎರಡನೆ ಬಾರಿ ಇಂತಹ ಸ್ಪರ್ಧೆ ನಡೆದಿದೆ. 2014ರಲ್ಲಿ ನೇಹಾ ಅವರು ಉತ್ತರಾಖಂಡ್‌ನ ಪೈಲ್ವಾನ್ ಸೋನು ಅವರನ್ನು ಸೋಲಿಸಿದ್ದರು.
ರವಿವಾರ ನೇಹಾ ಅವರು ಪುರುಷ ಕುಸ್ತಿಪಟುಗಳಿಗೆ ಸವಾಲು ಹಾಕಿದರು. ಈ ಪೈಕಿ ನವಾಬ್ ಸ್ಪರ್ಧೆಗೆ ಒಪ್ಪಿಕೊಂಡರು. ಆದರೆ ಆಕೆಯ ಮುಂದೆ ಗೆಲ್ಲಲು ಸಾಧ್ಯವಾಗಲಲಿಲ್ಲ. ಗೆಲುವು ದಾಖಲಿಸಿದ ಬಳಿಕ ನೇಹಾ ಮತ್ತೆ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳಿಗೆ ತನ್ನೊಂದಿಗೆ ಸ್ಪರ್ಧೆಗೆ ಸವಾಲು ಹಾಕಿದರು. ದಿಲ್ಲಿಯ ಹಾರೊನ್ ಅವರು ನೇಹಾ ಸವಾಲನ್ನು ಎದುರಿಸಲು ಅಣಿಯಾಗಿದ್ದಾರೆ. ಇವರ ನಡುವಿನ ಸ್ಪರ್ಧೆ ಮಂಗಳವಾರ ನಿಗದಿಯಾಗಿದೆ.
ಡೆಹ್ರಾಡುನ್‌ನ ಢಾಕ್ರಾಣಿ ಗ್ರಾಮದ ಕೃಷಿಕನ ಪುತ್ರಿ ನೇಹಾ 11ರ ಹರೆಯದಲ್ಲೇ ಕುಸ್ತಿ ಅಖಾಡಕ್ಕಿಳಿದಿದ್ದರು. ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ ಸಾಕ್ಷಿ ಮಲಿಕ್ ಅವರು ನೇಹಾಗೆ ಆದರ್ಶ ಕುಸ್ತಿಪಟು ಆಗಿದ್ದಾರೆ.ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನೇಹಾ ಅವರ ಮುಂದಿನ ಗುರಿ.





