ರೂ. 2 ಕೋಟಿಯ ವರೆಗೆ ಅಬಕಾರಿ ತೆರಿಗೆ ವಂಚಕರ ಬಂಧನ ಬೇಡ: ಕೇಂದ್ರ

ಹೊಸದಿಲ್ಲಿ, ಅ.11: ರೂ. 2 ಕೋಟಿಯ ವರೆಗೆ ಅಬಕಾರಿ ಸುಂಕ ವಂಚಿಸಿದವರನ್ನು ಬಂಧಿಸಬಾರದು ಹಾಗೂ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಾರದೆಂದು ಸರಕಾರ ಸೂಚಿಸಿದೆ. ತಾಂತ್ರಿಕ ಕಾರಣಗಳಿಗಾಗಿ ಅಬಕಾರಿ ಸುಂಕ ಪಾವತಿಸದವರಿಗೆ ದಂಡ ವಿಧಿಸುವಂತಹ ಪ್ರಸ್ತಾವಗಳನ್ನು ಜಾಗೃತಗೊಳಿಸಬಾರದೆಂದೂ ಅದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಹೊಸ ವ್ಯವಸ್ಥೆಯನ್ವಯ ರೂ. 2 ಕೋಟಿ ಅಥವಾ ಹೆಚ್ಚು ಮೊತ್ತದ ಅಬಕಾರಿ ತೆರಿಗೆ ವಂಚನೆ ಅಥವಾ ಸೆನ್‌ವ್ಯಾಟ್‌ನ ದುರ್ಬಳಕೆ ಮಾಡಿದ್ದರೆ ಮಾತ್ರ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಅಥವಾ ಬಂಧಿಸಬಹುದು.
ದೇಶಾದ್ಯಂತ ನಿಯಮಗಳ ಅನ್ವಯಕ್ಕೆ ಏಕರೂಪ ತರಲು ಅವುಗಳ ಬದಲಾವಣೆಯ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ ವಿವರಿಸಿದೆ.
ಕಾನೂನಿನ ವ್ಯಾಖ್ಯೆಗೆ ಸಂಬಂಧಿಸಿ ಭಿನ್ನಾಭಿಪ್ರಾಯ ಇತ್ಯಾದಿ ತಾಂತ್ರಿಕ ಸ್ವರೂಪದ ಅಬಕಾರಿ ಸುಂಕ ಉಲ್ಲಂಘನೆ ಪ್ರಕರಣಗಳಲ್ಲಿ ಬಂಧನ ಅಥವಾ ಕಾನೂನು ಕ್ರಮ ಕೈಗೊಳ್ಳುವಂತಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಸೇವಾ ತೆರಿಗೆ ವಂಚನೆ ಪ್ರಕರಣಗಳಲ್ಲಿ ಬಂಧನಕ್ಕೆ 2013ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಆ ನಿಯಮದ ಅವಕಾಶ ಹಾಗೂ ಅನ್ವಯದ ಮಿತಿ ಬಹಳ ಕಡಿಮೆಯಿದೆ. ತೆರಿಗೆ ವಂಚಿಸಿದವನನ್ನು ಬಂಧಿಸುವ ಮೊದಲು, ಅದು ವೈಯಕ್ತಿಕ ಸ್ವಾತಂತ್ರವನ್ನು ನಷ್ಟಗೊಳಿಸುತ್ತದೆ ಹಾಗೂ ಅಂತಹ ಕ್ರಮಗಳು ನ್ಯಾಯಾಂಗ ಪರಾಮರ್ಶೆಗೆ ಒಳಗಾಗಬೇಕೆಂಬುದನ್ನು ಅಧಿಕಾರಿಗಳು ಗಮನದಲ್ಲಿರಿಸಿಕೊಳ್ಳಬೇಕೆಂದು ತೆರಿಗೆ ಮಂಡಳಿ ಹೇಳಿದೆ.
ಬಂಧನದ ಅಧಿಕಾರವನ್ನು ಭಾರೀ ಹೊಣೆಗಾರಿಕೆ ಹಾಗೂ ಎಚ್ಚರಿಕೆಯಿಂದ ಬಳಸಬೇಕು. ಪ್ರಕರಣದ ಕಾನೂನು ಹಾಗೂ ವಾಸ್ತವಿಕ ಆಯಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸದ ಬಳಿಕವೇ ಆ ಅಧಿಕಾರ ಚಲಾಯಿಸಬೇಕು. ಬಂಧನಕ್ಕೆ ತಕ್ಕಂತಹ ಎಲ್ಲ ಅಂಶಗಳು ಪ್ರಕರಣದಲ್ಲಿವೆ ಎಂದ ಮಾತ್ರಕ್ಕೆ ಬಂಧಿಸಲೇಬೇಕೆಂದು ಅರ್ಥವಲ್ಲ. ಆರೋಪಿಯು ಸಾಕ್ಷನಾಶ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದರೆ ಮಾತ್ರ ಬಂಧಿಸಬೇಕೆಂದು ಅದು ಸ್ಪಷ್ಟಪಡಿಸದೆ.







