ಪಿಕ್‌ಅಪ್ - ಅಟೋ ರಿಕ್ಷಾ ಡಿಕ್ಕಿ : ರಿಕ್ಷಾ ಪ್ರಯಾಣಿಕ ಗಂಭೀರ
.jpg)
ಉಪ್ಪಿನಂಗಡಿ,ಅ.11: ಪಿಕ್‌ಅಪ್ ವಾಹನವೊಂದು ಅಟೋ ರಿಕ್ಷಾಕ್ಕೆ ಡಿಕ್ಕಿಯಾದ ಘಟನೆ ಅ.11ರಂದು ಸಂಜೆ ಉಪ್ಪಿನಂಗಡಿ ಬಳಿಯ ಕುಮಾರಧಾರ ಸೇತುವೆಯಲ್ಲಿ ನಡೆದಿದ್ದು, ಘಟನೆಯಿಂದ ರಿಕ್ಷಾ ಪ್ರಯಾಣಿಕ ಗಂಭೀರ ಗಾಯಗೊಂಡಿದ್ದಾರೆ.
ಉಪ್ಪಿನಂಗಡಿ ಗ್ರಾಮದ ಮಠದ ಹಿರ್ತಡ್ಕ ನಿವಾಸಿ ಇಸ್ಮಾಯೀಲ್ (27) ಗಾಯಗೊಂಡ ಪ್ರಯಾಣಿಕ. ಈತನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಕಡೆಯಿಂದ ನೆಕ್ಕಿಲಾಡಿ ಕಡೆಗೆ ಹೋಗುತ್ತಿದ್ದ ಪಿಕ್‌ಅಪ್ ವಾಹನವು ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಕುಮಾರಧಾರ ಸೇತುವೆಯಲ್ಲಿ ನೇರವಾಗಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ, ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಿಕ್ಷಾ ಸೇತುವೆಯ ಡಿವೈಡರ್ ಮೇಲೆ ಹತ್ತಿನಿಂತಿದ್ದು, ಸೇತುವೆಯ ತಡೆಗೋಡೆಗೆ ಒರಗಿ ನಿಂತಿದೆ. ಸೇತುವೆಗೆ ತಡೆಗೋಡೆ ಇಲ್ಲದಿದ್ದಲ್ಲಿ ರಿಕ್ಷಾ ನೇರವಾಗಿ ನದಿಗುರುಳುವ ಸಂಭವವಿತ್ತು.
ಘಟನೆಯ ಬಳಿಕ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಪಘಾತದ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





