ಮಂಗಳೂರು ದಸರಾ ವರ್ಣರಂಜಿತ ಮೆರವಣಿಗೆಗೆ ಚಾಲನೆ

ಮಂಗಳೂರು,ಅ.11:ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ಮಂಗಳೂರು ದಸರಾ ಮೆರವಣಿಗೆ ಇಂದು ಚಾಲನೆಗೊಂಡಿದೆ.
ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ ಹಾಗೂ ಶಾರದಾ ಮಾತೆಯ ವಿಗ್ರಹಗಳನ್ನು ಪೂಜಿಸಿದ ಬಳಿಕ ಕುದ್ರೋಳಿ ಕ್ಷೇತ್ರದಿಂದ ಮೆರವಣಿಗೆಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದಸರಾ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಹಕಾರ ನೀಡಿದ ಗಣ್ಯರಿಗೆ ಜನಾರ್ಧನ ಪೂಜಾರಿ ಸನ್ಮಾನ ಮಾಡಿದರು.
ಸಾಂಪ್ರದಾಯಿಕ ಹುಲಿವೇಷ, ಚೆಂಡೆವಾದನದತಂಡಗಳು, ಭಜನಾ ತಂಡಗಳು, ಬಣ್ಣದ ಕೊಡೆಗಳು, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಹಾಗೂ ವಿವಿಧ ಧಾರ್ಮಿಕ,ಪೌರಾಣಿಕ ಕಥೆಗಳ ಸ್ತಬ್ಧ ಚಿತ್ರಗಳು,ನೃತ್ಯ ರೂಪಕ ಗಳು ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆ ಗಳೊಂದಿಗೆ ವಿವಿಧ ತಂಡ ಗಳು ಭಾಗವಹಿಸಿ ಪ್ರದರ್ಶನ ನೀಡುವುದ ರೊಂದಿಗೆ ಮಂಗಳೂರು ದಸರಾ ಮೆರವಣಿಗೆಗೆ ರಂಗೇರಿಸಿತು. ನಗರದಾದ್ಯಂತ ಅಂಗಡಿ ಮಳಿಗೆಗಳು ಬಣ್ಣದ ವಿದ್ಯುತ್ ದೀಪ ಗಳಿಂದ ಅಲಂಕೃತ ಗೊಂಡು, ಹಾರಾಡುತ್ತಿದ್ದ ಹಳದಿ ಧ್ವಜಗಳು ಮೆರವಣಿಗೆಗೆ ರಂಗೇರಿಸಿದೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ದಲ್ಲಿ ಆರಂಭಗೊಂಡ ದಸರಾ ಮೆರವಣಿಗೆ ಕಂಬ್ಳಾರಸ್ತೆ, ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಹಂಪನಕಟ್ಟೆ ಮಾರ್ಗವಾಗಿ ರಥಬೀದಿ ರಸ್ತೆಯ ಮೂಲಕ ಅಳಕೆಗೆ ಬಂದು ಕುದ್ರೋಳಿಯಲ್ಲಿ ಸಮಾಪನಗೊಳ್ಳಲಿದೆ.ಈ ಹಿಂದಿನ ಮೆರವಣಿಗೆ ಇಡೀ ರಾತ್ರಿ ನಗರ ಸಂಚಾರ ಮಾಡಿ ಮರುದಿನ ಮುಂಜಾನೆ ಮರಳಿ ಕುದ್ರೋಳಿ ತಲುಪುತ್ತಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಇಡೀ ರಾತ್ರಿ ಮೆರವಣಿಗೆ ನಡೆದು ಬುಧವಾರ ಮುಂಜಾನೆಯ ವೇಳೆಗೆ ಕುದ್ರೋಳಿ ತಲುಪುವ ಸಾಧ್ಯತೆ ಇದೆ.
ಮೆರವಣಿಗೆಯ ಚಾಲನೆ ಸಂದರ್ಭದಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಶಾಸಕ ಜೆ.ಆರ್.ಲೋಬೋ, ಕ್ಷೇತ್ರ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಜಯ ಸಿ ಸುವರ್ಣ, ಪ್ರಮುಖರಾದ ಪದ್ಮರಾಜ್ ಆರ್, ರವಿಶಂಕರ್ ಮಿಜಾರ್, ಮಹೇಶ್ ಚಂದ್ರ, ಬಿ.ಆರ್.ತಾರನಾಥ, ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಪತ್ರಕರ್ತ ಮನೋಹರ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು ದಸರ ಮೆರವಣಿಗೆಗೆ ಮಳೆ ಸಿಂಚನ
ಮಂಗಳೂರು ದಸರ ಮೆರವಣಿಗೆ ಆರಂಭವಾದ ನಂತರ ಮಂಗಳೂರಿನಲ್ಲಿ ಕೆಲಹೊತ್ತುಗಳ ಕಾಲ ಮಳೆ ಸುರಿಯಿತು. ಮಂಗಳೂರು ನಗರದ ವಿವಿಧೆಡೆ ಮಳೆ ಸುರಿದಿದ್ದು ದಸರ ಮೆರವಣಿಗೆ ಆರಂಭವಾದ ಕುದ್ರೋಳಿಯಲ್ಲಿಯೂ ಮಳೆ ಸಿಂಚನವಾಯಿತು.







