ಶೋಪಿಯಾನ್‌ನಲ್ಲಿ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ: 7 ಮಂದಿಗೆ ಗಾಯ

ಶೋಪಿಯಾನ್, ಅ.11: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿಂದು ಅರೆ ಸೇನಾ ಪಡೆಯ ಗಸ್ತು ತಂಡವೊಂದರ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ 7 ಮಂದಿ ನಾಗರಿಕರು ಹಾಗೂ ಒಬ್ಬ ಜವಾನ ಗಾಯಗೊಂಡಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ತಂಡವೊಂದರ ಮೇಲೆ ಗ್ರೆನೇಡ್ ಎಸೆಯಲಾಗಿದ್ದು, ಭಯೋತ್ಪಾದಕರು ಪರಾರಿಯಾಗಿದ್ದಾರೆ.
ಶ್ರೀನಗರದ ಹೊರ ವಲಯದ ಪಾಂಪೋರ್‌ನಲ್ಲಿ ಭದ್ರತಾ ಪಡೆಗಳು ಬೃಹತ್ ಸರಕಾರಿ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದ ಭಯೋತ್ಪಾದಕರನ್ನು 24 ತಾಸುಗಳ ಸುದೀರ್ಘ ಹೋರಾಟದಲ್ಲಿ ಮಟ್ಟ ಹಾಕಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಸೇನೆಯ ವಿಶೇಷ ದಳಗಳು, ಅರೆ ಸೇನಾ ಯೋಧರು ಹಾಗೂ ಭಯೋತ್ಪಾದನಾ ನಿಗ್ರಹ ಪೊಲೀಸರು ನಿನ್ನೆ ಮುಂಜಾನೆ 6:30ರ ಸುಮಾರಿಗೆ ಉದ್ಯಮಾಭಿವೃದ್ಧಿ ಸಂಸ್ಥೆಯ ಕಟ್ಟಡದೊಳಗೆ ಅವಿತು ದಾಳಿ ನಡೆಸಿದ್ದ ಉಗ್ರರ ವಿರುದ್ಧ ಪ್ರತಿದಾಳಿ ಆರಂಭಿಸಿದ್ದರು.
ಸಂಸ್ಥೆಯಲ್ಲಿ ಆಗಾಗ ಗ್ರೆನೇಡ್ ಸ್ಫೋಟದ ಸದ್ದು ಕೇಳಿಸುತ್ತಿತ್ತು. ಕಟ್ಟಡ ಭಾಗಶಃ ಸುಟ್ಟು ಹೋಗಿದೆ. ಭಯೋತ್ಪಾದಕರು ಝೀಲಂ ನದಿಯ ಮೂಲಕ ದೋಣಿಯೊಂದರಲ್ಲಿ ಅಲ್ಲಿಗೆ ಬಂದಿದ್ದರೆಂದು ಮೂಲಗಳು ತಿಳಿಸಿವೆ.





