ಹಿಂಸಾ ಧೋರಣೆಯತ್ತ ಪ್ರಜ್ಞಾವಂತರು ಆಕರ್ಷಿತರಾಗದಿರಿ: ಡಾ. ಗಣೇಶ್ ದೇವಿ
ನೀನಾಸಂ ಸಂಸ್ಕೃತಿ ಶಿಬಿರ-2016
.jpg)
ಸಾಗರ, ಅ.11: ಸರ್ವಾಧಿಕಾರಿ ಮನೋಭಾವದ ಸರಕಾರ ಕ್ರೌರ್ಯ, ಹಿಂಸೆ ಹಾಗೂ ನಮ್ಮ ಪ್ರಜ್ಞೆಯ ಮೇಲೆ ದಾಳಿ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜ್ಞ್ಞಾವಂತರು ಹಿಂಸೆಗೆ ಹಿಂಸೆ ಎನ್ನುವ ಧೋರಣೆಯತ್ತ ಆಕರ್ಷಿತವಾಗದೆ, ಮಾತುಕತೆ, ಚರ್ಚೆ ಹಾಗೂ ಅಹಿಂಸಾತ್ಮಕ ನಡೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಧಾರವಾಡದ ಚಿಂತಕ ಹಾಗೂ ಪದ್ಮಶ್ರೀ ಪುರಸ್ಕೃತ ಲೇಖಕ ಡಾ. ಗಣೇಶ್ ದೇವಿ ಹೇಳಿದರು.
ತಾಲೂಕಿನ ನೀನಾಸಂನಲ್ಲಿ ಮಂಗಳವಾರ ನೀನಾಸಮ್ ಸಂಸ್ಕೃತಿ ಶಿಬಿರ-2016ರಲ್ಲಿ ಅವರು ‘ಬಹುತ್ವ ಮತ್ತು ಪ್ರಜಾಪ್ರಭುತ್ವ ವಿಷಯ ಕುರಿತು ಮಾತನಾಡುತ್ತಿದ್ದರು. ಭಾರತದಲ್ಲಿ ಸಾಕ್ಷರತೆ ಸ್ಥಾಪನೆಗಾಗಿ ಸ್ವಾತಂತ್ರ ನಂತರದ ದಿನಗಳಿಂದಲೂ ಪ್ರಯತ್ನ ನಡೆಯುತ್ತಿದೆ. ಆದರೆ ಈತನಕ ಪೂರ್ಣ ಪ್ರಮಾಣದಲ್ಲಿ ಸಾಕ್ಷರತೆ ಸ್ಥಾಪನೆಯ ಕನಸು ನನಸಾಗಿಲ್ಲ. ಅಕ್ಷರ, ಆರೋಗ್ಯ, ಮೂಲಭೂತ ಸೌಲಭ್ಯ ಎಲ್ಲ ವರ್ಗದ ಜನರಿಗೂ ತಲುಪಿ ಸಮಾನತೆ ಸ್ಥಾಪನೆಯಾಗಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಆದರೆ ಇಂದಿಗೂ ಸಂಸತ್‌ನಲ್ಲಿ ಕಡಲತಡಿಯ ಜನರು, ಗುಡ್ಡಗಾಡು ಜನರು, ವನವಾಸಿಗಳ ಪ್ರತಿನಿಧಿಗಳು ಆಯ್ಕೆಯಾಗಿ ಬರುವುದು ಕಡಿಮೆ. ಇದರಿಂದಾಗಿ ಅಂತಹವರ ಧ್ವನಿಗೆ ನ್ಯಾಯ ಸಿಗುತ್ತಿಲ್ಲ ಎಂದರು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕಿನ ಬಗ್ಗೆಯೇ ಸಾಕಷ್ಟು ಜಿಜ್ಞಾಸೆ ಇದೆ. 18 ವರ್ಷದ ನಂತರದವರು, 55 ವರ್ಷ ಕಳೆದವರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಶೇ.80ರಷ್ಟು ಮತದಾರರು ಸಕ್ರಿಯ ಮತದಾನದಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಸಂಸತ್‌ಗೆ ಆಯ್ಕೆಯಾಗಿ ಬರುವವರು ಶೇ.20ರಷ್ಟು ಮತದಾರರ ಪ್ರತಿನಿಧಿಯಾಗಿ ಮಾತ್ರ ಉಳಿದುಕೊಳ್ಳುತ್ತಿದ್ದಾರೆ. ಇದರಿಂದ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿಲ್ಲ ಎಂದು ಅಭಿಪ್ರಾಯಿಸಿದರು. ಕಳೆದ ಎರಡು ಸಾವಿರ ವರ್ಷಗಳೀಚೆ ಮನುಷ್ಯನ ಆಲೋಚನೆಯ ಘಟ್ಟಕ್ಕೆ ಪ್ರಮುಖವಾದ ಚಾಲನೆ ಸಿಕ್ಕಿದೆ. ಮನುಷ್ಯನ ಮೆದುಳು ಚಿಂತಿಸಬಲ್ಲದು, ಚಿಂತಿಸುವುದನ್ನು ಗ್ರಹಿಸುವ ಶಕ್ತಿಯನ್ನು ಹೊಂದಿದೆ. ಆದರೆ ಮನುಷ್ಯ ಚಲನೆಯಲ್ಲಿರುವ ಮೂರು ಕಾಲದ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾನೆ. ಇದರಿಂದ ಬಹುಕಾಲ, ಬಹುದೇಶ ಹಾಗೂ ಬಹುತ್ವದ ಎದುರು ಭಾಷೆ ಸೋಲನ್ನು ಅನುಭವಿಸುವಂತೆ ಆಗಿದೆ. ಜೈವಿಕ, ಸಾಂಸ್ಕೃತಿಕ, ವಸ್ತುವಿನ ಬಹುತ್ವ ಒಂದರ್ಥದಲ್ಲಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ತಿಳಿಸಿದರು. ವೈವಿಧ್ಯ ಮತ್ತು ಬಹುತ್ವ ಎರಡೂ ಅಗತ್ಯವಾಗಿದ್ದರೂ, ಬಹುತ್ವದ ಕಲ್ಪನೆ ಇಲ್ಲದೆ ಹೋದಾಗ ಮನುಷ್ಯನ ಯೋಚನೆ ಹಾಗೂ ಯೋಜನೆಗಳು ವೈಫಲ್ಯವನ್ನು ಕಾಣುತ್ತವೆ. ಭಾರತದಲ್ಲಿ ಸ್ವಾತಂತ್ರ ಚಳವಳಿಯ ಜೊತೆಜೊತೆಗೆ ಬೌದ್ಧಿಕ ಚಳವಳಿ ಸಹ ನಡೆದಿತ್ತು. ಸಮಾನತೆ, ನ್ಯಾಯಯುತ ಸಮಾಜ ನಿರ್ಮಾಣ ಪರಿಕಲ್ಪನೆ ನಮಗೆ ಸ್ವಾತಂತ್ರಚಳವಳಿಯ ಜೊತೆಗೆ ಹುಟ್ಟಿಕೊಂಡಿದ್ದರಿಂದ ಅದನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಹ ಪ್ರಯತ್ನ ನಡೆಯಬೇಕು ಎಂದು ವಿಶ್ಲೇಷಿಸಿದರು. ರಂಗಕರ್ಮಿ ಕೆ.ವಿ.ಅಕ್ಷರ, ಮಾಧವ ಚಿಪ್ಳಿ, ಶ್ರೀರಾಮ್, ಟಿ.ಪಿ.ಅಶೋಕ್, ಜಯಪ್ರಕಾಶ್ ಮಾವಿನಕುಳಿ, ಎಚ್.ಎಸ್.ವೆಂಕಟೇಶಮೂರ್ತಿ, ಕೆ.ವಿ.ತಿರುಮಲೇಶ್, ಜಸ್ವಂತ್ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.





