ಸಾಹಿತ್ಯ ನಮ್ಮಿಂದ ದೂರವಾಗುತ್ತಿರುವುದು ವಿಷಾದನೀಯ: ದಾದಾಪೀರ್
ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ

ಕಡೂರು, ಅ.11: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಹಿತ್ಯ ನಮ್ಮಿಂದ ದೂರವಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ತರೀಕೆರೆ ತಾಲೂಕು ಕಸಾಪ ಅಧ್ಯಕ್ಷ, ಕವಿ ದಾದಾಪೀರ್ ಹೇಳಿದ್ದಾರೆ.
ಕಡೂರಿನ ಕೋಟೆ ಶೃಂಗೇರಿ ಶಂಕರ ಮಠದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಿರಿಗನ್ನಡ ವೇದಿಕೆ, ಕಡೂರು ತಾಲೂಕು ಸಿರಿಗನ್ನಡ ವೇದಿಕೆ, ಶೃಂಗೇರಿ ಶಾರದಾ ಪ್ರತಿಷ್ಠಾನಂ, ಹಾಗೂ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಕಡೂರು ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕಾವ್ಯ ಹುಟ್ಟುವುದು ಕವಿಗಳ ನೋವು ನಲಿವುಗಳ ಸಂಕೇತವಾಗಿದ್ದರೂ ಸಹ ಸತತ ಅಧ್ಯಯನದಿಂದ ಉತ್ತಮವಾದ ಕಾವ್ಯ ರಚಿಸಲು ಸಾಧ್ಯವಾಗುತ್ತದೆ ಎಂದರು.
ಕವಿ ಗುರುರಾಜ ಹಾಲ್ಮಠ್ ಅಧ್ಯಕ್ಷತೆ ವಹಿಸಿ ಅವರ ಸ್ವರಚಿತ ಕವನವನ್ನು ವಾಚಿಸಿ ಕವನದ ಸೃಷ್ಟಿಗೆ ವಸ್ತುವಿನ ಆಯ್ಕೆ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ವಸ್ತುವಿಗಿಂತ ಪದಗಳ ಜೋಡಣೆ ಪ್ರಮುಖವಾದುದು. ಓದುಗರಿಗೆ ಅರ್ಥವಾಗುವಂತಿರಬೇಕು ಮತ್ತು ಸರಳವಾಗಿರಬೇಕು ಎಂದು ನುಡಿದರು.
ಜಿಲ್ಲಾ ಮಟ್ಟದ ಕವಿಗೋಷ್ಠಿ ಬಹಳ ವರ್ಷಗಳ ಕಾಲ ನಡೆದೇ ಇರಲಿಲ್ಲ ಈ ಕಾರ್ಯವನ್ನು ಮಾಡಿದ ಸಿರಿಗನ್ನಡ ವೇದಿಕೆಯ ಎಲ್ಲ ಪದಾಧಿಕಾರಿ ಗಳಿಗೆ ಅಭಿನಂದನೆ ಗಳು. ಜಿಲ್ಲೆಯ ಉದಯೋನ್ಮುಖ ಕವಿಗಳ ಪರಿಚಯ ವನ್ನು ಮಾಡಿಕೊಟ್ಟಿದೆ. ಈ ದಿನದ ಕವಿಗೋಷ್ಠಿಯಲ್ಲಿ ಬಹಳಷ್ಟು ಉತ್ತಮ ಕವಿತೆಗಳು ಮೂಡಿ ಬಂದಿವೆ ಕವಿಗಳು ಆಯ್ಕೆ ಮಾಡಿಕೊಂಡಿರುವ ವಿಷಯ ಪ್ರಸ್ತುತ ಸಂಗತಿಗಳೇ ಹೆಚ್ಚಾಗಿವೆ. ನಾಡು, ನುಡಿ ಬಗ್ಗೆ ಉತ್ತಮ ವಾದ ಕವನಗಳು ಮೂಡಿಬಂದಿವೆ ಎಂದು ಹೇಳಿದರು. ಆಶಯ ನುಡಿಯನ್ನು ಮೂಡಿಗೆರೆ ಸುಂದರಬಂಗೇರ, ಸಿರಿಗನ್ನಡವೇದಿಕೆ ಜಿಲ್ಲಾಧ್ಯಕ್ಷ ಸೂರಿ ಶ್ರೀನಾವಾಸ್, ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಮಾತನಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ 60 ಜನ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿನರಸಿಂಹರಾಜಪುರ ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಬಿ.ವೈ.ಆರ್. ವಾಲ್ಮೀಕಿ, ತರೀಕೆರೆ ತಾಲೂಕು ಘಟಕದ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಕಡೂರು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕುಪ್ಪಳು ಶಾಂತಮೂರ್ತಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಮುಗುಳಿಕಟ್ಟೆ ಲೋಕೇಶ್, ಬಿ.ವೆಂಕಟೇಶ್, ಬಿ.ಚಂದ್ರಶೇಖರ್, ರುದ್ರಪ್ಪ ಉಪಸ್ಥಿತರಿದ್ದರು.







