ಕೂಡಿಗೆ ಹೈನುಗಾರಿಕೆ ಕೇಂದ್ರ ಅಭಿವೃದ್ಧಿಗೆ ಕ್ರಮ: ಸಚಿವ ಮಂಜು
ಆಯುಧಪೂಜಾ ಕಾರ್ಯಕ್ರಮ

ಸುಂಟಿಕೊಪ್ಪ, ಅ.11: ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಕೂಡಿಗೆ ಹೈನುಗಾರಿಕಾ ಕೇಂದ್ರವನ್ನು ಮಾಹಿತಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಪಶುಪಾಲನ ಇಲಾಖಾ ಸಚಿವ ಎ. ಮಂಜು ಹೇಳಿದರು. ನಗರದ ವಾಹನ ಚಾಲಕರ ಸಂಘದ ವತಿಯಿಂದ ಆಚರಿಸಲಾದ ಆಯುಧಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವುದು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ. ರೈತರಿಗೆ ಅನುಕೂಲಕರವಾದ ಖಾತೆ ನೀಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ತಿಳಿಸಿದ ಸಚಿವರು, ಆಯುಧಪೂಜೆ, ವಿಜಯ ದಶಮಿ ಹಬ್ಬಗಳ ಶುಭಾಶಯಕೋರಿ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪ್ರತಿ ವರ್ಷ ಆಯುಧ ಪೂಜಾ ಸಮಾರಂಭದಲ್ಲಿ ವಾಹನ ಚಾಲಕರ ಸಂಘದವರ ಹಲವು ಮೂಲಭೂತ ಸೌಲಭ್ಯಗಳ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಆದರೆ, ಸರಕಾರಿ ಪದವಿ ಕಾಲೇಜು ಸ್ಥಾಪನೆಗೆ ಕಾನೂನಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
3 ಸೆಂಟ್, 5 ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರು 94ಸಿ ಪ್ರಕಾರ ಅರ್ಜಿ ಪಡೆದು ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಡಿತರ ಚೀಟಿದಾರರಿಗೆ ಕೂಪನ್ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸಿ ರದ್ದು ಪಡಿಸಲು ಶ್ರಮಿಸಲಾಗುವುದು. ನಿವೇಶನ ಇಲ್ಲದವರಿಗೆ 10 ಎಕ್ರೆ ಸರಕಾರಿ ಜಾಗ ಗುರುತಿಸಿ ನಿವೇಶನದ ಸೈಟ್ ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಕೆ.ಪಿ. ಚಂದ್ರಕಲಾ, ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ತಾಲೂಕು ಪಂಚಾಯತ್ ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಹಾಸನ ಗ್ರಾಹಕರ ವ್ಯಾಜ್ಯದ ಅಧ್ಯಕ್ಷ ಎ.ಲೊಕೇಶ್ ಕುಮಾರ್ ಮಾತನಾಡಿದರು. ಉಪಾಸಿ ಅಧ್ಯಕ್ಷ ವಿನೋದ್ ಶಿವಪ್ಪ, ರಾಜ್ಯ ಐಎನ್‌ಟಿಯುಸಿ ಉಪಾಧ್ಯಕ್ಷ ನಾಪ್ಪಂಡ ಮುತ್ತಪ್ಪ, ವಿಎಸ್‌ಎಸ್‌ಎನ್ ಬ್ಯಾಂಕ್‌ನ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ಕೃಷಿಕ ಎ.ಎಸ್. ರಾಮಣ್ಣ, ಉದ್ಯಮಿ ಮೊದು, ವಾಹನಚಾಲಕರ ಸಂಘದ ಅಧ್ಯಕ್ಷ ತಿಮ್ಮಪ್ಪ, ಕಾರ್ಯದರ್ಶಿ ಸುರೇಶ್, ಗೌರವಾಧ್ಯಕ್ಷ ಕಿಟ್ಟಣ್ಣ ರೈ, ಉಪಾಧ್ಯಕ್ಷ ಇ.ಕೆ. ಇಸ್ಮಾಯೀಲ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೃಷ್ಣಪ್ಪ, ಕುಮಾರ, ರಝಾಕ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.







