ಸಾಗರ: 2.60 ಕೋ.ರೂ. ಮೀನು ಮಾರುಕಟ್ಟೆ ಅಭಿವೃದ್ಧಿ: ಸಚಿವ ಕಾಗೋಡು ತಿಮ್ಮಪ್ಪ
ಸ್ಥಳ ಪರಿಶೀಲನೆ
.jpg)
ಸಾಗರ, ಅ.11: ಮೀನು ಮಾರುಕಟ್ಟೆ ಅಭಿವೃದ್ಧಿಗೆ 2.60 ಕೋಟಿ ರೂ. ಬಿಡುಗಡೆಯಾಗಿದ್ದು, ಭೂಸೇನಾ ನಿಗಮ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಇಲ್ಲಿನ ಮೀನು ಮಾರುಕಟ್ಟೆ ಪ್ರದೇಶಕ್ಕೆ ರವಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಸಜ್ಜಿತ ಒಣ ಮತ್ತು ಹಸಿ ಮೀನು ಮಾರುಕಟ್ಟೆಯನ್ನು ಯೋಜ ನೆಯಡಿ ನಿರ್ಮಿಸಲಾಗುವುದು ಎಂದು ಹೇಳಿದರು. ಮೀನು ಹಾಗೂ ಮಾಂಸ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಸಾರ್ವಜನಿಕರು ವ್ಯಾಪಾರಕ್ಕೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಕಾಮಗಾರಿಗೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿದೆ. ಮುಂದಿನ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಿ, ಮಾರುಕಟ್ಟೆ ಲೋಕಾರ್ಪಣೆ ಮಾಡುವಂತಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಯೋಜನೆಯಡಿ ಶಿಥಿಲಾವಸ್ಥೆಯಲ್ಲಿರುವ ಒಣಮೀನು ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡುವುದು, ಮೀನು ಸಂಗ್ರಹಣೆಗೆ ಕೋಲ್ಡ್ ಸ್ಟೋರೇಜ್ ನಿರ್ಮಾಣ, ಮೀನು ಹಾಗೂ ಮಾಂಸ ಮಾರುಕಟ್ಟೆಯಿಂದ ಬಿಡುವ ಕಲುಷಿತ ನೀರನ್ನು ಶುದ್ಧೀಕರಿಸಿ ವಾಸನೆ ಬಾರದಂತೆ ಹೊರಗೆ ಬಿಡಲು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಚಿವರು ಇದೆ ವೇಳೆ ನುಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಝೂರ್ ಅಲಿ ಖಾನ್, ನಗರಸಭೆ ಪ್ರಭಾರಿ ಕಾರ್ಯಪಾಲಕ ಅಭಿಯಂತರ ಎಚ್.ಕೆ. ನಾಗಪ್ಪ, ಭೂಸೇನಾ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮುಹಮ್ಮದ್ ಫಾರೂಕ್ ಮತ್ತಿತರರು ಹಾಜರಿದ್ದರು.





