ಸ್ವಚ್ಛ ಮಾಡಬೇಕಾಗಿರುವುದು ಯಾವುದನ್ನು?!

ಈ ದೇಶ ಕಂಡ ಅತ್ಯಂತ ಪ್ರಾಮಾಣಿಕ ಹಾಗೂ ವಿವಾದಾತ್ಮಕ ವ್ಯಕ್ತಿಯಾದ ಮಹಾತ್ಮಾ ಗಾಂಧೀಯು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಅದನ್ನೇ ನಮ್ಮ ದೇಶದ ಮಾನ್ಯ ಪ್ರಧಾನಿಯವರು 'ಸ್ವಚ್ಛ ಭಾರತ್' ಅಭಿಯಾನ ಮಾಡಿ ಸ್ವಚ್ಛತೆಯ ಬಗ್ಗೆ ಒಂದು ಅರಿವು ಮೂಡಿಸಲು ಪ್ರಯತ್ನಿಸಿದರು. ಆದರೆ ಅದು ಯಶಸ್ವಿಯಾಯಿತೇ? ಬರೀ ಮಾಧ್ಯಮದಲ್ಲಿ ಪ್ರಚಾರ ಪಡೆಯಿತೇ? ಜನಸಾಮಾನ್ಯರಲ್ಲಿ ನಿಜವಾಗಿಯೂ ಅರಿವು ಮೂಡಿಸಿತೇ? ಪೊರಕೆ ಹಿಡಿದು ಪ್ರಧಾನಿ ಜನಮನ ಗೆದ್ದರೆ? ನಯಾ ಪೈಸೆಯ ಬಂಡವಾಳ ಹೂಡದೇ ಮಾಡಿದ ಚಾಣಾಕ್ಷ್ಯ ತಂತ್ರವೇ? ಪೊರಕೆಗೆ ಕೊಡಬೇಕಾದ ಹಣವನ್ನು ಮಾಧ್ಯಮಗಳಿಗೆ ಹರಿಸಿದರೇ? ಎಂಬ ಹಲವಾರು ಪ್ರಶ್ನೆಗಳಿಗೆ ಅವರವರೇ ಯಾವುದೇ ಸಿದ್ದಾಂತ ಹಾಗೂ ಪೂರ್ವಗ್ರಹಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳಬೇಕು.
ಇತ್ತೀಚಿಗೆ ದಲಿತ ಹಾಗೂ ದಮನಿತರೆಲ್ಲ ಸೇರಿ ತಮ್ಮ ಸ್ವಾಭಿಮಾನ, ಆಹಾರ ಹಾಗೂ ಭೂಮಿಗಾಗಿ 'ಉಡುಪಿ ಚಲೋ' ಸ್ವಾಭಿಮಾನಿ ಸಂಘರ್ಷ ಜಾಥಾ ಹಮ್ಮಿಕೊಂಡಿದ್ದರು. ಅವರ ಮೇಲಾಗುವ ದೌರ್ಜನ್ಯ ಹಲ್ಲೆ ಹಾಗೂ ಮಾನಸಿಕ ಹಿಂಸೆ ಇವು ಅವರನ್ನು ಕೆಣಕುತ್ತಿರುವುದು ಸುಳ್ಳಲ್ಲ. ಎಲ್ಲ ವಿಧದಿಂದ ಅವರು ಇಲ್ಲಿಯನಕ ಅನ್ಯಾಯಕ್ಕೆ ತುತ್ತಾಗಿದ್ದಾರೆ. ಆಹಾರ ವಯಕ್ತಿಕ ಆಯ್ಕೆ ಎನ್ನುವುದು ಎಲ್ಲರಿಗೂ ಗೊತ್ತು ಹಾಗಿದ್ಯಾಗ್ಗೂ ತಮಗಿಷ್ಟ ಬಂದ ಆಹಾರವನ್ನು ಅವರು ಸೇವಿಸುವಂತಿಲ್ಲ. ಉತ್ತರ ಭಾರತದಲ್ಲಿ ಬ್ರಾಹ್ಮಣರೂ ಸಹ ಗೋಮಾಂಸ ಸೇವಿಸುತ್ತಿದ್ದರು ಎಂಬುದನ್ನು ತಿಳಿಯದ ಮೂರ್ಖ ಯಾರೂ ಇಲ್ಲ. ಗೋವು ರಾಜಕೀಯ ದಾಳವಾಗುತ್ತಿದೆ. ಒಂದುವೇಳೆ ಇದೇ ದಲಿತರೆಲ್ಲ ಸೇರಿ ಜಗದೀಶ್ ಚಂದ್ರ ಬೋಸ್ ಹೇಳಿರುವಂತೆ ಸಸ್ಯಗಳಿಗೂ ಜೀವವಿದೆ, ನೀವ್ಯಾರೂ ಸಸ್ಯಗಳನ್ನು ತಿನ್ನಬೇಡಿ ಎಂದು ಉಳಿದವರ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಮಾಡತೊಡಗಿದರೆ ಸಸ್ಯಾಹಾರಿಗಳು ಏನು ಮಾಡುವರು? ಮತ್ತೊಬ್ಬರ ಆಹಾರದ ಮೇಲೆ ನಿರ್ಬಂಧನೆ ಹೇರುವುದು ಯಾಕೆ?!
ಈ ಜಗತ್ತು ಕಂಡ ಶ್ರೇಷ್ಟ ವಿದ್ವಾಂಸರಲ್ಲಿ ಅಗ್ರಗಣ್ಯರಾದ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಹೋರಾಟ ಮತ್ತು ಸಂಘಟನೆ ಇವುಗಳನ್ನೇ ಆಯುಧಗಳನ್ನಾಗಿ ಇಟ್ಟುಕೊಂಡು ದಲಿತ-ದಮನಿತರು ಅಕ್ಷರಶಃ ಅಂಬೇಡ್ಕರ್ ಅವರ ಮಾತನ್ನು ಕೃತಿ ರೂಪಕ್ಕೆ ಇಳಿಸಲು ಹೊರಟಿರುವುದು ಸ್ವಾಗತಾರ್ಹ! ಉಡುಪಿಯಲ್ಲಿ ದಲಿತರು ತಮ್ಮ ಸ್ವಾಭಿಮಾನ, ಆಹಾರದ ಹಕ್ಕು ಹಾಗೂ ಭೂಮಿ ಗಾಗಿ ಜಾಥಾ ಮಾಡಿಕೊಂಡು ಬಂದರೆ ಉಳಿದವರಿಗೇಕೆ ಉಡುಪಿ ಹೊಲಸಾಗಿದೆ ಎಂದು ಅನಿಸಬೇಕು? ಇದು ಭೌತಿಕ ಹೊಲಸಿನ ಪ್ರಶ್ನೆಯಲ್ಲ, ಮೇಲ್ವರ್ಗದವರ ಆಂತರಿಕ ಹೊಲಸಿನ ಪ್ರಶ್ನೆ. ಗಾಂಧಿಗೆ ಪೊರಕೆ ಹಿಡಿಸಿ, ಕನಕನ ಹೆಸರಲ್ಲಿ ತಮ್ಮ ವಿಕೃತಿಯನ್ನು ಹೊರಹಾಕಹೊರಟಿರುವುದು ಅವರ ಶತಶತಮಾನದ ದ್ವೇಷವನ್ನು ಹೊರಹಾಕಿದಂತೆ ,ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ ಎಂದು ಬಿಂಭಿಸಿದಂತೆ.
ಸ್ವಚ್ಛವಾಗಬೇಕಾಗಿರುವುದು ಉಡುಪಿಯ ನೆಲವಲ್ಲ, ಅದನ್ನು ಸ್ವಚ್ಛಗೊಳಿಸಬೇಕು ಎಂದು ಹೊರಟವರ ಮನಸ್ಥಿತಿ. ಮಾನವರನ್ನು ಮಾನವರಾಗಿ ಕಾಣದೇ ಮಾನವರಾಗಿರುವುದು ಸಾಧ್ಯವೇ ಇಲ್ಲ.





