ಕಬಡ್ಡಿ ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಅಹ್ಮದಾಬಾದ್, ಅ.11: ಕಬಡ್ಡಿ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಆತಿಥೇಯ ಭಾರತ ತಂಡ 57-20 ಅಂಕಗಳ ಅಂತರದಿಂದ ಜಯ ಸಾಧಿಸಿದೆ.
ಮಂಗಳವಾರ ಇಲ್ಲಿ ನಡೆದ ತನ್ನ 3ನೆ ಲೀಗ್ ಪಂದ್ಯದಲ್ಲಿ ಅನೂಪ್ ಕುಮಾರ್ ನೇತೃತ್ವದ ಭಾರತ ತಂಡ ಪರಿಪೂರ್ಣ ಪ್ರದರ್ಶನ ನೀಡಿತು. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಭಾರತದ ಡಿಫೆನ್ಸ್ ವಿಭಾಗ ದುರ್ಬಲವಾಗಿತ್ತು. ಇಂದಿನ ಪಂದ್ಯದಲ್ಲಿ ರಕ್ಷಣಾ ವಿಭಾಗದಲ್ಲಿ ಸುಧಾರಣೆ ಕಂಡುಬಂದಿತ್ತು.
ಪ್ರದೀಪ್ ನರ್ವಾಲ್ ಹಾಗೂ ಅಜಯ್ ಠಾಕೂರ್ ಆರಂಭದಲ್ಲೇ ಬಾಂಗ್ಲಾದೇಶದ ರಕ್ಷಣಾಕೋಟೆಯನ್ನು ಬೇಧಿಸಿದರು. ದ್ವಿತೀಯಾರ್ಧದಲ್ಲಿ ಕಣಕ್ಕಿಳಿದ ಸುರೇಂದ್ರ ನಡಾ 5 ಅಂಕ ಗಳಿಸಿ ಗಮನ ಸೆಳೆದರು.
ಮೋಹಿತ್ ಚಿಲ್ಲರ್ ಹಾಗೂ ನಿತಿನ್ ಥೋಮರ್ ತಂಡದ ಭರ್ಜರಿ ಗೆಲುವಿನಲ್ಲಿ ಕಾಣಿಕೆ ನೀಡಿದರು. ಭಾರತ ಆ.15 ರಂದು ನಡೆಯಲಿರುವ ತನ್ನ 4ನೆ ಪಂದ್ಯದಲ್ಲಿ ಅರ್ಜೆಂಟೀನ ತಂಡವನ್ನು ಎದುರಿಸಲಿದೆ.
Next Story





