ಹಾಲೆಂಡ್‌ಗೆ ಸೋಲುಣಿಸಿದ ಫ್ರಾನ್ಸ್
2018ರ ವಿಶ್ವಕಪ್ ಅರ್ಹತಾ ಪಂದ್ಯ

ಆಮ್‌ಸ್ಟರ್ಡಂಮ್, ಅ.11: ಪೌಲ್ ಪೊಗ್ಬಾ ಮೊದಲಾರ್ಧದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಹಾಲೆಂಡ್ ವಿರುದ್ಧದ 2018ರ ವಿಶ್ವಕಪ್ ಅರ್ಹತಾ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿದೆ.
ಬೆಲ್ಜಿಯಂ ಹಾಗೂ ಪೋರ್ಚುಗಲ್ ತಂಡಗಳು ಸುಲಭ ಜಯ ಸಾಧಿಸಿವೆ.
ಪ್ಯಾರಿಸ್‌ನಲ್ಲಿ ಶುಕ್ರವಾರ ನಡೆದ ಬಲ್ಗೇರಿಯ ವಿರುದ್ಧ ಪಂದ್ಯದಲ್ಲಿ ತೋರಿದ್ದ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಕೋಚ್ ಡಿಡಿಯರ್ ಡೆಸ್ಚಾಂಪ್‌ರಿಂದ ಟೀಕೆಗೆ ಗುರಿಯಾಗಿದ್ದ ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ ಪೊಗ್ಬಾ ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಆಕರ್ಷಕ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಸ್ವದೇಶದಲ್ಲಿ ನಡೆದ 2016ರ ಯುರೋ ಕಪ್ ಫೈನಲ್‌ನಲ್ಲಿ ಸೋತಿದ್ದ ಫ್ರಾನ್ಸ್ ತಂಡ ಎ ಗುಂಪಿನಲ್ಲಿ 7 ಅಂಕ ಗಳಿಸಿ ಸ್ವೀಡನ್‌ನೊಂದಿಗೆ ಅಗ್ರ ಸ್ಥಾನ ಹಂಚಿಕೊಂಡಿದೆ. ಉಭಯ ತಂಡಗಳು ನವೆಂಬರ್ 11 ರಂದು ಮುಖಾಮುಖಿಯಾಗಲಿವೆ.
ಬೆಲ್ಜಿಯಂ ಹಾಗೂ ಪೋರ್ಚುಗಲ್ ತಂಡಗಳು ಫುಟ್ಬಾಲ್ ಶಿಶುಗಳಾದ ಗಿಬ್ರಲ್ಟರ್ ಹಾಗೂ ಫಾರೊಯ್ ಐಲೆಂಡ್ಸ್ ತಂಡಗಳ ವಿರುದ್ಧ 6-0 ಗೋಲುಗಳ ಅಂತರದಿಂದ ಜಯ ಸಾಧಿಸಿದವು.
ಫಾರೊ ವಿರುದ್ಧದ ಪಂದ್ಯದಲ್ಲಿ ಕೇವಲ 7 ಸೆಕೆಂಡ್‌ನಲ್ಲಿ ಅತ್ಯಂತ ವೇಗದ ಗೋಲು ಬಾರಿಸಿದ ಬೆಲ್ಜಿಯಂನ ಸ್ಟ್ರೈಕರ್ ಬೆನ್‌ಟೆಕ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದರು.
ನವೆಂಬರ್ 1993ರಲ್ಲಿ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸ್ಯಾನ್ ಮರಿನೊ 8.3 ಸೆಕೆಂಡ್‌ನಲ್ಲಿ ಬಾರಿಸಿದ್ದ ಮಿಂಚಿನ ಗೋಲು ದಾಖಲೆಯನ್ನು ಬೆನ್‌ಟೆಕ್ ಮುರಿದರು.







