ಕೋಟ್ಯಂತರ ರೂ. ಮೊತ್ತದ ಜಿಂಕೆ ಕೊಂಬುಗಳ ವಶ
ಓರ್ವ ಆರೋಪಿಯ ಬಂಧನ

ಬೆಳಗಾವಿ, ಅ.11: ಇಲ್ಲಿನ ಶೆಟ್ಟಿಗಲ್ಲಿಯಲ್ಲಿನ ಹಳೆಯ ಮನೆಯೊಂದರಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಕೋಟ್ಯಂತರ ರೂಪಾಯಿ ಮೊತ್ತದ ಆನೆ ದಂತ, ಜಿಂಕೆ, ಸಾರಂಗದ ಕೊಂಬುಗಳನ್ನು ವಶಪಡಿಸಿಕೊಳ್ಳುವಲ್ಲಿ ನಗರದ ಮಾರ್ಕೆಟ್ ಠಾಣಾ ಪೊಲೀಸರು ಮಂಗಳ ವಾರ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲೀಂ ಚೌದಾಗಾರ (45) ಎಂಬವನನ್ನು ಬಂಧಿಸಿದ್ದಾರೆ. ಆರೋಪಿಯು ತನ್ನ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ದಿಢೀರ್ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮಾರ್ಕೆಟ್ ಠಾಣಾ ಪೊಲೀಸರು ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಯಿಂದ 2 ಆನೆದಂತ, ಜಿಂಕೆ ಮತ್ತು ಸಾರಂಗದ ಕೊಂಬುಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಒಂದೂವರೆ ಟನ್‌ಗೂ ಅಧಿಕ ತೂಕದ ವನ್ಯಜೀವಿಗಳ ವಿವಿಧ ಅವಶೇಷ ಗಳನ್ನು ವಶಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರೋಪಿಯು ಅಕ್ರಮವಾಗಿ ಸಂಗ್ರಹಿಸಿದ ವನ್ಯಜೀವಿ ಗಳ ಅವಶೇಷ ಗಳನ್ನು ಚೀನಾ ಸೇರಿದಂತೆ ವಿದೇಶಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಸುಮಾರು ಹದಿನೈದು, ಇಪ್ಪತ್ತು ವರ್ಷಗಳ ಹಿಂದೆಯೇ ವನ್ಯಜೀವಿಗಳ ದಂತ ಮತ್ತು ಕೊಂಬುಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಈ ಸಂಬಂಧ ಇಲ್ಲಿನ ಮಾರ್ಕೆಟ್ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.





