ಬಾಲವನದ ಕಾರ್ಯಕ್ರಮಗಳು ಸರಕಾರಕ್ಕೆ ಸೀಮಿತವಾಗದಿರಲಿ: ಸಚಿವ ರೈ

ಪುತ್ತೂರು, ಅ.11: ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಡಾ.ಶಿವರಾಮ ಕಾರಂತರು ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ರಾಷ್ಟ್ರದ ಸೊತ್ತಾಗಿದ್ದಾರೆ. ಅವರ ಕರ್ಮಭೂಮಿಯಾದ ಬಾಲವನದಲ್ಲಿ ನಡೆಯುವ ಕಾರ್ಯಕ್ರಮಗಳು ಕೇವಲ ಸರಕಾರದ ಕಾರ್ಯಕ್ರಮಗಳಾಗಿರದೆ ಜನರ ಕಾರ್ಯಕ್ರಮಗಳಾಗಬೇಕು. ಈ ನಿಟ್ಟಿದಲ್ಲಿ ಎಲ್ಲ ಜನರ ಪ್ರೋತ್ಸಾಹ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸೋಮವಾರ ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಕಾರಂತರ ಜನ್ಮದಿನಾಚರಣೆ ಮತ್ತು ಕಾರಂತರ ಸಾಹಿತ್ಯ ಲೋಕ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಕಾರಂತರ ಸಂಸ್ಮರಣೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ಭುವನೇಶ್ವರಿ ಹೆಗ್ಡೆ, ನಿಸರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕಾರಂತರ ಆಶಯದಂತೆ ಬಾಲವನದಲ್ಲಿ ಪರಿಸರವನ್ನು ಕಾಪಾಡಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯಲಿ. ಮರಗಿಡಗಳನ್ನು ಉಳಿಸಿ ಕಾರಂತರನ್ನು ಗೌರವಿಸುವ ಕೆಲಸವಾಗಲಿ ಎಂದರು.
ಜಾತಿ, ಮತ ಪಂಥ ಮೀರಿ ಬದುಕಿದ ಡಾ.ಕಾರಂತರು ತಾವು ನಾಸ್ತಿಕರಾಗಿದ್ದರೂ ಆಸ್ತಿಕರನ್ನು ಎಂದೂ ಗೇಲಿ ಮಾಡಿಲ್ಲ. ಅನ್ಯಾಯವನ್ನು ಎಂದೂ ಸಹಿಸಿಕೊಳ್ಳದ ಅವರು ಅನ್ಯಾಯ ಕಂಡಾಗ ಯಾರನ್ನೂ ಕಾಯದೆ ಎದ್ದು ನಿಂತು ವಿರೋಧಿಸುವ ಒಂಟಿ ಸಲಗವಾಗಿದ್ದರು ಎಂದರು. ಡಾ.ಕಾರಂತರ ಒಡನಾಡಿ ಮಂಚಿಯ ಹಿರಿಯ ಕೃಷಿಕ ಪಡಾರು ಮಹಾಬಲೇಶ್ವರ ಭಟ್ ಮಾತನಾಡಿದರು. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸಹಾಯಕ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು. ಬಾಲವನ ಸಮಿತಿ ಅಧ್ಯಕ್ಷ ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ವಂದಿಸಿದರು. ಬಾಲವನ ಸಮಿತಿ ಸದಸ್ಯರಾದ ಪ್ರೊ.ಬಿ.ಜೆ.ಸುವರ್ಣ ಮತ್ತು ವಿದ್ಯಾಗೌರಿ ಕಾರ್ಯಕ್ರಮವನ್ನು ನಿರೂಪಿಸಿದರು.





