ಶರೀಅತ್ ನಿಯಮಗಳಲ್ಲಿ ಸರಕಾರದ ಹಸ್ತಕ್ಷೇಪ ಖಂಡನೀಯ: ಎಸ್ಸೆಸ್ಸೆಫ್
ಮಂಗಳೂರು, ಅ.11: ಮುಸ್ಲಿಮರ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ತಲಾಕ್ ಹಾಗೂ ಬಹುಪತ್ನಿತ್ವ ವಿಚಾರಗಳಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿರುವ ಕ್ರಮವನ್ನು ಅಖಿಲ ಭಾರತ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಖಂಡಿಸಿದೆ. ಇದು ಏಕರೂಪ ನಾಗರಿಕ ಸಂಹಿತೆಯನ್ನು ಹಿಂಬಾಗಿಲ ಮೂಲಕ ಹೇರುವ ಪ್ರಯತ್ನದಂತಿದ್ದು, ಭಾರತದ ಬಹುಧರ್ಮೀಯ ಸಮಾಜಕ್ಕೆ ಒಪ್ಪುವಂಥದ್ದಲ್ಲ ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಹೇಳಿದ್ದಾರೆ.
ಎಲ್ಲ ಪ್ರಯತ್ನಗಳ ಹೊರತಾಗಿಯೂ ದಾಂಪತ್ಯ ಜೀವನ ಮುಂದುವರಿಸಲು ಅಸಾಧ್ಯ ಎಂಬ ಸಂಕೀರ್ಣ ಸ್ಥಿತಿಯಲ್ಲಿ ವಿಚ್ಛೇದನಕ್ಕೆ ಇಸ್ಲಾಮ್ ಅವಕಾಶ ನೀಡಿದೆ. ಏಕಕಾಲಕ್ಕೆ ಮೂರು ತಲಾಕ್ ಹೇಳಿದರೆ ಅದು ಸಿಂಧುವಾಗುವುದಾದರೂ ಹಂತ ಹಂತವಾಗಿ ತಲಾಕ್ ನೀಡುವ ಮೂಲಕ ಸಂಬಂಧ ಸುಧಾರಣೆಗೆ ಕಾಲಾವಕಾಶ ನೀಡಬೇಕೆಂದೇ ಇಸ್ಲಾಮ್ ನಿರ್ದೇಶಿಸಿದೆ. ಅದಲ್ಲದೆ ವಿಧವೆ, ಅನಾಥೆಯರಿಗೆ ಬಾಳು ನೀಡುವುದಕ್ಕಾಗಿ ಬಹುಪತ್ನಿತ್ವವನ್ನು ಧರ್ಮ ಸಮ್ಮತಿಸಿದ್ದರೂ ಪತ್ನಿಯರ ಮಧ್ಯೆ ನೂರಕ್ಕೆ ನೂರು ಸಮಾನತೆ ಪಾಲಿಸಬೇಕೆಂಬ ಶರತ್ತನ್ನು ವಿಧಿಸಲಾಗಿದೆ.
ಬಹುಪತ್ನಿತ್ವ ಸಂವಿಧಾನ ವಿರೋಧಿ ಅಲ್ಲವೆಂದು 1952ರಲ್ಲೇ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ವಿಚ್ಛೇದನ ಮತ್ತು ಬಹುಪತ್ನಿತ್ವವನ್ನು ಪಾಲಿಸುವ ಮುಸ್ಲಿಮೇತರರೂ ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಹೀಗಿರುವಾಗ ಮುಸ್ಲಿಮರ ವೈಯಕ್ತಿಕ ಕಾನೂನುಗಳ ಮೇಲೆ ಸರಕಾರ ಸವಾರಿ ಮಾಡಬಾರದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





