ವಿಮಾನದ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ

ಜಕಾರ್ತ, ಅ. 12: ದೋಹಾದಿಂದ ಇಂಡೋನೇಶ್ಯದ ಜಕಾರ್ತಕ್ಕೆ ಆಗಮಿಸಿದ ವಿಮಾನವೊಂದರ ಶೌಚಾಲಯದಲ್ಲಿ ಆಗ ತಾನೆ ಜನಿಸಿದ ಮಗುವೊಂದರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಪ್ರಶ್ನಿಸಲು ಪೊಲೀಸರು ಕಾಯುತ್ತಿದ್ದಾರೆ.
ಜಕಾರ್ತದ ಪ್ರಮುಖ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕತಾರ್ ಏರ್‌ವೇಸ್ ವಿಮಾನವನ್ನು ಕೆಲಸಗಾರರು ರವಿವಾರ ರಾತ್ರಿ ಶುಚಿಗೊಳಿಸುತ್ತಿದ್ದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.
ಭ್ರೂಣಕ್ಕೆ ಐದರಿಂದ ಏಳು ತಿಂಗಳಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವಿಮಾನ ನಿಲ್ದಾಣದ ಪೊಲೀಸ್ ವಕ್ತಾರ ಎಂಡಂಗ್ ಸುತ್ರಿಸ್ನ ಸುದ್ದಿಗಾರರಿಗೆ ತಿಳಿಸಿದರು. ಭ್ರೂಣವು ಶೌಚಾಲಯದಲ್ಲಿ ಟಿಶ್ಯೂ ಪೇಪರ್‌ನಿಂದ ಆವರಿಸಲ್ಪಟ್ಟಿತ್ತು.
ವಿಮಾನದಲ್ಲಿ ಪ್ರಯಾಣಿಸಿದ್ದ ಇಂಡೋನೇಶ್ಯದ ವಲಸಿಗ ಕೆಲಸಗಾರ್ತಿಯೊಬ್ಬರನ್ನು ಮೊದಲು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ಪೂರ್ವ ಜಕಾರ್ತದಲ್ಲಿರುವ ಪೊಲೀಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಪೊಲೀಸರ ವಿಚಾರಣೆ ಎದುರಿಸಲು ಸಮರ್ಥರಾಗಿದ್ದಾರೆ ಎಂಬುದಾಗಿ ವೈದ್ಯರು ಹೇಳಿದ ಬಳಿಕ ಅವರನ್ನು ವಿಚಾರಣೆಗೆ ಗುರಿಪಡಿಸಲಾಗುವುದು.





