ಎಸ್‌ಒಸಿಯಲ್ಲಿ ಮಾಧ್ಯಮ ಸಂಶೋಧನಾ ಕೇಂದ್ರ ಉದ್ಘಾಟನೆ

ಮಣಿಪಾಲ, ಅ.12: ದೇಶದ ವಿವಿ ವ್ಯವಸ್ಥೆಯಲ್ಲೇ ವಿಶಿಷ್ಟವೆನಿಸಿದ ‘ಮಾಧ್ಯಮ ಸಂಶೋಧನಾ ಕೇಂದ್ರ’ವೊಂದು ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್‌ನಲ್ಲಿ ಇಂದು ಸಂಜೆ ಉದ್ಘಾಟನೆಗೊಂಡಿತು.
ಮಾಧ್ಯಮ ಸಂಶೋಧನಾ ಕೇಂದ್ರವನ್ನು ಮಣಿಪಾಲ ವಿವಿಯ ಉಪಕುಲಪತಿ ಡಾ.ಎಚ್.ವಿನೋದ್ ಭಟ್ ಹಾಗೂ ಪ್ರಸಿದ್ಧ ಮಾಧ್ಯಮ ಸಂಶೋಧಕ ಡಾ.ಬಿನೋದ್ ಸಿ.ಅಗರ್ವಾಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ವಿನೋದ್ ಭಟ್, ಮಣಿಪಾಲ ವಿವಿ 2020ರೊಳಗೆ ವಿಶ್ವದ ಶ್ರೇಷ್ಠ 200 ವಿವಿಯೊಳಗೆ ಸ್ಥಾನ ಪಡೆಯಲು ಪ್ರಯತ್ನಿಸುತಿದ್ದು, ಈ ನಿಟ್ಟಿನಲ್ಲಿ ಇಂಥ ಸಂಶೋಧನಾ ಕೇಂದ್ರಗಳ ಮಹತ್ವವನ್ನು ವಿವರಿಸಿದರು. ತನ್ನ ಗುರಿಯತ್ತ ಮಣಿಪಾಲ ವಿವಿ ಸಾಗುವಲ್ಲಿ ಇದು ಮಹತ್ವದ ಸ್ಥಾನ ಪಡೆದಿದೆ ಎಂದರು.
ಸಂಶೋಧನೆಗಳ ಪ್ರಕಟಣೆ, ಅದು ಜನರಿಗೆ ತಲುಪುವಲ್ಲಿ ಪಡೆಯುವ ಯಶಸ್ಸು ಹಾಗೂ ಅದು ನೀತಿ ನಿರೂಪಣೆಯಲ್ಲಿ ಪಡೆಯುವ ಸ್ಥಾನ ಈ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇವುಗಳ ಬಗ್ಗೆ ಸಂಶೋಧನೆಗಳ ದೃಷ್ಟಿ ಹರಿಯಬೇಕಿದೆ ಎಂದರು.
ಡಾ.ಬಿಂದು ಸಿ.ಅಗರ್ವಾಲ್ ಮಾತನಾಡಿ, ಅಕಾಡೆಮಿಕ್ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಧ್ಯಮ ಹಾಗೂ ಸಂವಹನಗಳ ಕುರಿತ ಸಂಶೋಧನೆಗೆ ಇರುವ ಅವಕಾಶಗಳನ್ನು ವಿವರಿಸಿದರು. ಸದ್ಯಕ್ಕೆ ವಿವಿಗಳ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗಗಳಲ್ಲಿ ಸಂಶೋಧನೆಗೆ ಯಾವುದೇ ಆದ್ಯತೆ ಸಿಗುತ್ತಿಲ್ಲ ಎಂದು ವಿಷಾಧಿಸಿದರು.
ಟೆಲಿವಿಷನ್ ಹಾಗೂ ರೇಡಿಯೋಗಳ ವಿಸ್ತರಣೆಯೊಂದಿಗೆ ಕೇವಲ ಪ್ರೇಕ್ಷಕರ ಸಂಖ್ಯೆಗಳ ಪರಿಗಣನೆಗೆ ಈ ಸಂಶೋನೆ ಸೀಮಿತಗೊಂಡಿದೆ ಎಂದವರು ನುಡಿದರು. ಮೊಬೈಲ್ ಟೆಲಿವಿಷನ್ ಮತ್ತು ಇಂಟರ್‌ನೆಟ್‌ನ ದಾಪುಗಾಲಿನೊಂದಿಗೆ ಇದೀಗ ಸಂವಹನ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಇದರಿಂದ ಈ ಕ್ಷೇತ್ರದಲ್ಲೂ ಅವಕಾಶಗಳ ಬಾಗಿಲು ತೆರೆದಿದೆ ಎಂದು ಡಾ.ಅಗರ್ವಾಲ್ ನುಡಿದರು.







