ಸಾಲು ಸಾಲು ರಜೆಗಳ ಎಫೆಕ್ಟ್: ಎಟಿಎಂಗಳಲ್ಲಿ ಹಣ ಖಾಲಿ
.jpg)
ಶಿವಮೊಗ್ಗ, ಅ. 12: ತಿಂಗಳ ಮೊದಲಾರ್ಧದಲ್ಲಿ ಆಗಮಿಸಿದ ಸಾಲು ಸಾಲು ಸರಕಾರಿ ರಜೆಯ ನೇರ ಎಫೆಕ್ಟ್ ಎಟಿಎಂಗಳ ಮೇಲೆ ಬಿದ್ದಿದೆ. ಎಟಿಎಂ ಕೇಂದ್ರಗಳಿಂದ ಹಣ ಪಡೆಯಲು ಬ್ಯಾಂಕ್ ಗ್ರಾಹಕರು ಅಕ್ಷರಶಃ ಹರಸಾಹಸ ನಡೆಸುವಂತಾಗಿದೆ.
ಇತರೆ ದಿನಗಳಿಗೆ ಹೋಲಿಕೆ ಮಾಡಿದರೆ, ಕಳೆದೆರೆಡು ದಿನಗಳಿಂದ ಎಟಿಎಂಗಳಿಂದ ಹಣ ತೆಗೆದುಕೊಳ್ಳುವ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ. ಇದರಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳ ಎಟಿಎಂಗಳು ಹಣವಿಲ್ಲದೆ ಬರಿದಾಗಿರುವ ಮಾಹಿತಿಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಪ್ರಮುಖ ಬ್ಯಾಂಕ್ ಸೇರಿದಂತೆ ಇತರೆ ಎಲ್ಲ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಗ್ರಾಹಕರು ಹಣಕ್ಕಾಗಿ ತಮ್ಮ ಕ್ರೆಡಿಟ್, ಡಿಬಿಟ್ ಕಾರ್ಡ್‌ಗಳನ್ನು ತೂರಿಸಿದರೇ, ಎಟಿಎಂ. ಸ್ಕ್ರೀನ್‌ನಲ್ಲಿ ಹಣ ಲಭ್ಯವಿಲ್ಲ ಎಂಬ ಸಂದೇಶ ಬರುತ್ತಿದೆ. ಇದರಿಂದ ಗ್ರಾಹಕರು ಎಟಿಎಂಗಳಿಂದ ನಿರಾಸೆಯಿಂದ ಹಿಂದಿರುಗುತ್ತಿರುವ ದೃಶ್ಯ ಹಲವೆಡೆ ಕಂಡುಬರುತ್ತಿದೆ.
ರಜೆಯ ಸಾಲು: ಅ. 8 ಎರಡನೆ ಶನಿವಾರ, ಅ.9 ರವಿವಾರ, ಅ. 10 ಸೋಮವಾರ ಅ.11 ಮಂಗಳವಾರ ಕ್ರಮವಾಗಿ ಆಯುಧ ಪೂಜೆ, ವಿಜಯದಶಮಿ ಹಾಗೂ ಅ. 12 ಮೊಹರಂ ಕಡೆಯ ದಿನದ ಅಂಗವಾಗಿ ಬ್ಯಾಂಕ್‌ಗಳಿಗೆ ರಜೆಯಿತ್ತು. ಸಾಲು ಸಾಲು ರಜೆಯ ಮೋಜು ಅನುಭವಿಸಲು ಪ್ರವಾಸ, ಧಾರ್ಮಿಕ ಕ್ಷೇತ್ರಗಳ ಪ್ರಯಾಣ, ಬಂಧು ಬಳಗದವರನ್ನು ಭೆೇಟಿಯಾಗಲು ತೆರಳುವವರು ಸೇರಿದಂತೆ ವಿವಿಧ ಕಾರಣಗಳಿಗಾಗಿ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಿದೆ. ಪ್ರಸ್ತುತ ಏಕಕಾಲಕ್ಕೆ ಐದು ದಿವಸಗಳ ರಜೆ ಬಂದಿದೆ. ಜೊತೆಗೆ ಹಬ್ಬಗಳ ಸಂಭ್ರಮ ಬೇರೆ. ಇದರಿಂದ ಎಟಿಎಂಗಳಿಂದ ಹಣ ಡ್ರಾ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಎಟಿಎಂಗಳಲ್ಲಿ ಹಣವಿಲ್ಲದೆ ಬರಿದಾಗಿರುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಉದ್ಯೋಗಿಯೋರ್ವರು ಹೇಳುತ್ತಾರೆ. ‘ಕಳೆದೆರೆಡು ದಿನಗಳಿಂದ ಎ.ಟಿ.ಎಂ.ನಿಂದ ಹಣ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಎ.ಟಿ.ಎಂ.ನಲ್ಲಿ ಹಣ ಬರಿದಾಗಿದೆ. ಗ್ರಾಹಕರಿಗೆ ಹಣವಿಲ್ಲವೆಂದು ಹೇಳಿ ಹೇಳಿ ತಮಗೆ ಸಾಕಾಗಿ ಹೋಗಿದೆ’ ಎಂದು ಎಟಿಎಂವೊಂದರ ಕಾವಲುಗಾರ ತನ್ನ ಅಳಲು ತೋಡಿಕೊಳ್ಳುತ್ತಾನೆ. ‘ಸುರಕ್ಷತೆಯ ದೃಷ್ಟಿಯಿಂದ ತಮ್ಮ ಬಳಿ ಹಣ ಇಟ್ಟುಕೊಳ್ಳುವುದಿಲ್ಲ. ಅಗತ್ಯವಿರುವ ಹಣವನ್ನು ಎಟಿಎಂಗಳ ಮೂಲಕ ಪಡೆದುಕೊಳ್ಳುತ್ತೇನೆ. ಆದರೆ ನಗರದ ಕೆಲ ಎಟಿಎಂಗಳಲ್ಲಿ ಹಣ ಖಾಲಿಯಾಗಿದೆ’ ಎಂದು ನಾಗರಿಕರೊಬ್ಬರು ಹೇಳುತ್ತಾರೆ.







