9-11 ಖಾತೆ ಮ್ಯುಟೇಷನ್ ವಿಭಾಗ ಸರಿಪಡಿಸಲು ಸಿಎಂಗೆ ಸಾರ್ವಜನಿಕರ ಮನವಿ
ಉಪ್ಪಿನಂಗಡಿ, ಅ.12: 9-11 ಮುಖಾಂತರ ಖರೀದಿಸಿರುವ ಜಾಗದ ಮ್ಯುಟೇಷನ್ ಯಾ ಖಾತೆಯಾಗುವ ಪ್ರಕ್ರಿಯೆ ಕಳೆದ ಗ್ರಾಮ ಪಂಚಾಯತ್ ಚುನಾವಣೆ ಬಳಿಕ ಸ್ಥಗಿತಗೊಂಡಿದ್ದು ಇದರಿಂದಾಗಿ ಬಡವರು ತೀರಾ ಸಮಸ್ಯೆ ಎದುರಿಸುವಂತಾಗಿದ್ದು, ಇದನ್ನು ಶೀಘ್ರ ಬಗೆಹರಿಸುವಂತೆ ಕೊಲ ಗ್ರಾಮಸ್ಥರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಈ ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಸಾಲ ಅಥವಾ ಅಡಮಾನ ಸಾಲ ಮಾಡಲು ಬ್ಯಾಂಕಿಗೆ ಹೋದರೆ ಮ್ಯುಟೇಷನ್ ಖಾತೆ ತರಬೇಕು ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್‌ಗಳಲ್ಲಿ ಕೇಳಿದರೆ ತಾಂತ್ರಿಕ ದೋಷದಿಂದ ತೆಗೆಯಲು ಆಗುವುದಿಲ್ಲ ಎಂದು ತಿಳಿಸುತ್ತಿದ್ದಾರೆ. ಹೀಗಾಗಿ ಸಮಸ್ಯೆ ತೀರಾ ಜಟಿಲಗೊಂಡಿದ್ದು, ಇದರಿಂದಾಗುವ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
1997-98ರ ಬಳಿಕ ಪಡೆದ ಕದೀಂ ವರ್ಗ ಕೃಷಿ ಕೃತಾವಳಿ ಭೂಮಿ ಖುಷ್ಕಿ ಜಾಗದ ಕಾಡು ಬಾಣೆ ಜಾಗ ಖರೀದಿ ಮಾಡಿದವರ ಹೆಸರಿನಲ್ಲಿ ಅಕ್ರಮ ಸಕ್ರಮದಡಿ ಫಾರಂ ನಂಬರ್ 50 ಮತ್ತು 53ರಲ್ಲಿ ಅರ್ಜಿ ಕೊಟ್ಟಿದ್ದು, ಕೃಷಿ ಜಾಗವನ್ನು ಸಕ್ರಮ ಮಾಡಲು ಸರಕಾರದ ತಡೆ ಇದ್ದ ಕಾರಣ ಈ ತನಕ ಮಂಜೂರು ಆಗಿರುವುದಿಲ್ಲ. ಹೀಗಾಗಿ ಖರೀದಿ ಮಾಡಿದವರ ಹೆಸರಿನಲ್ಲಿ ಯಾವುದೇ ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆ ಆಗಿರುವುದಿಲ್ಲ, ಹಾಗೂ ಬಹುತೇಕ ರೈತರು ತಿಳುವಳಿಕೆ ಕೊರತೆಯಿಂದ ಅಕ್ರಮ-ಸಕ್ರಮ ಅರ್ಜಿ ಕೊಡದೆ ಬಾಕಿಯಾಗಿರುತ್ತಾರೆ. ಆದ ಕಾರಣ ಈ ಸಮಸ್ಯೆಯಲ್ಲಿ ಸಿಲುಕಿರುವ ರೈತರಿಗೆ ಅನುಕೂಲ ಆಗುವ ಸಲುವಾಗಿ ಕೃಷಿ ರೈತರಿಗೆ ಅಕ್ರಮ ಸಕ್ರಮದ ಅಡಿಯಲ್ಲಿ ಅರ್ಜಿ ಕೊಡಲು ಅವಕಾಶ ಕಲ್ಪಿಸಿ ಕಂದಾಯ ಇಲಾಖೆಗೆ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಅದಾಗ್ಯೂ ರೈತರ ತೋಟಗಳಿಗೆ ಕೊಳವೆ ಬಾವಿ ತೆರೆಯಲು ಮತ್ತು ವಿದ್ಯುತ್ ಸಕ್ರಮಗೊಳಿಸಲು ಅವಕಾಶ ಒದಗಿಸಿಕೊಡಬೇಕಾಗಿಯೂ ಮನವಿಯಲ್ಲಿ ತಿಳಿಸಲಾಗಿದೆ.
ಕೊಯ್ಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ನೀಡಿದ ನಿಯೋಗದಲ್ಲಿ ಗಂಡಿಬಾಗಿಲು ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಬಡ್ಡಮೆ, ಕೃಷಿಕರಾದ ಪಿ.ಎಸ್. ಶಿವಶಂಕರ್ ಭಟ್, ಪಿ. ಯಾಕೂಬ್, ಹಸನಬ್ಬ ಮೊದಲಾದವರು ಉಪಸ್ಥಿತರಿದ್ದರು.







