ದಲಿತರು ಕಾಂಗ್ರೆಸ್‌ನ ವಾರಸುದಾರರು: ಮೋಟಮ್ಮ
ಕಾಂಗ್ರೆಸ್ ಎಸ್ಸಿ-ಎಸ್ಟಿ ಜಿಲ್ಲಾ ಕಾರ್ಯಕಾರಿಣಿ ಸಭೆ

ಚಿಕ್ಕಮಗಳೂರು, ಅ.12: ದಲಿತ ವರ್ಗದ ಜನ ಕಾಂಗ್ರೆಸ್‌ನಲ್ಲಿ ಬರೀ ಕಾರ್ಯ ಕರ್ತರು ಮಾತ್ರವಲ್ಲ ಅವರು ಪಕ್ಷದ ವಾರಸುದಾರರು ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಭೆಗಳಲ್ಲಿ ಅಧ್ಯಕ್ಷತೆ ವಹಿಸುವುದು, ಕಾರ್ಯಕರ್ತರಾಗುವುದರೊಂದಿಗೆ ದಲಿತರಿಗೆ ವಾರಿಸುದಾರಿಕೆ ಸಿಕ್ಕಿದೆ. ಆದರೆ, ಬೇರೆ ಸಂದರ್ಭಗಳಲ್ಲೂ ನಿಜವಾದ ಪ್ರಾಮುಖ್ಯತೆ ಸಿಗುವಂತಾಗಬೇಕು ಎಂಬುದನ್ನು ಇತರ ವರ್ಗದ ನಾಯಕರು ಅರ್ಥಮಾಡಿಕೊಳ್ಳಬೇಕು. ದಲಿತರು ಪಕ್ಷಕ್ಕೆ ಹೆಚ್ಚು ಒಲವು ತೋರಿ ಮತ ಹಾಕುತ್ತಿರುವುದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ಎಂಬುದನ್ನು ನಾಯಕರು ಅರಿತು ಅದಕ್ಕೆ ಸರಿಸಮನಾಗಿ ಸ್ಪಂದಿಸಬೇಕು ಎಂದರು.
ಬಿಜೆಪಿಯವರು ಬೂಟಾಟಿಕೆಯ ಸಾಮೂಹಿಕ ಸಹಬೋಜನ ಮಾಡುತ್ತಿ ರುವುದು ನಾಟಕೀಯ ಬೆಳವಣಿಗೆ. ಶಾಸಕರು ತಮ್ಮ ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದರೆ ಸಾಲದು ದಲಿತರ ಊರು ಕೇರಿಗಳಿಗೆ ಹೋಗಿ ಊಟ ಮಾಡ ಬೇಕು. ಅತ್ತ ರಾಜಕಾರಣಕ್ಕಾಗಿ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಾರೆ. ಮತ್ತೊಂದೆಡೆ ಅದರ ಹಿಂದೆ ದಲಿತರ ಮೇಲೆ ಹಲ್ಲೆ ದೌರ್ಜನ್ಯ ಮಾಡುತ್ತಾರೆ ಎಂದು ದೂರಿದ್ದರೆ.
ಜಿಲ್ಲಾಧ್ಯಕ್ಷ ಡಾ. ವಿಜಯ್ ಕುಮಾರ್, ಎಂ.ಎಲ್. ಮೂರ್ತಿ, ವಕ್ತಾರ ಎ.ಎನ್. ಮಹೇಶ್, ಬಿ.ಎಂ. ಸಂದೀಪ್, ಹಿರೇಮಗಳೂರು ಮತ್ತಿತರರು ಉಪಸ್ಥಿತರಿದ್ದರು.







