ಗಂಜಿಕೇಂದ್ರ ಸ್ಥಗಿತ : ತಹಶೀಲ್ದಾರ್ ವಿರುದ್ಧ ನಿರಾಶ್ರಿತರ ಪ್ರತಿಭಟನೆ

ಅಂಕೋಲಾ,ಅ.12: ಕೇಣಿಯ ಗಾಂವ್ಕರವಾಡದಲ್ಲಿ ಮಳೆಯ ತೀವ್ರತೆಗೆ ಹಳ್ಳ ತುಂಬಿದ ಪರಿಣಾಮ ಸುಮಾರು 40ಕ್ಕೂ ಅಧಿಕ ಮನೆಗಳು ಜಲಾವೃತಗೊಂಡು ನಿರಾಶ್ರಿತರಾದ ಸ್ಥಳೀಯರಿಗೆ ತಾಲೂಕು ಆಡಳಿತದಿಂದ ಮಂಗಳವಾರ ಕೇಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿಕೇಂದ್ರ ಆರಂಭಿಸಿದ್ದರು. ಆದರೆ ಬುಧವಾರ ಇದ್ದಕ್ಕಿದ್ದಂತೆಯೇ ಗಂಜಿಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೊಚ್ಚಿಗೆದ್ದ ಸ್ಥಳೀಯ ನಿರಾಶ್ರಿತರು ತಹಶೀಲ್ದಾರರ ವಿರುದ್ಧ ಧಿಕ್ಕಾರ ಕೂಗಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಹಿಂದೆಂದೂ ಕಂಡುಬರದ ಕೇಣಿ ಹಳ್ಳವು ಮಂಗಳವಾರ ಬೆಳಗಿನಜಾವ ಮಳೆಯ ತೀವ್ರತೆಗೆ ಉಕ್ಕಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿ ಬಹುತೇಕ ಸಾಮಗ್ರಿಗಳು ಹಾನಿಗೊಳಗಾಗಿದ್ದವು. ಇತರ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಇಲ್ಲಿಯ ಜನರನ್ನು ಮಂಗಳವಾರ ಬೆಳಗಿನಜಾವವೇ ಸ್ಥಳಾಂತರಿಸಿ 40 ಕುಟುಂಬದ 150ಕ್ಕೂ ಅಧಿಕ ಸದಸ್ಯರಿಗೆ ತಾಲ್ಲೂಕ ಆಡಳಿತದಿಂದ ಗಂಜಿ ಕೇಂದ್ರವನ್ನು ಆರಂಭಿಸಿಲಾಯಿತು.
ಇದ್ದಕ್ಕಿಂತೆಯೇ ತಾಲೂಕು ಆಡಳಿತ ಗಂಜಿ ಕೇಂದ್ರವನ್ನು ಸ್ಥಗಿತಗೊಳಿಸಿದ್ದರಿಂದ ಸ್ಥಳೀಯ ಪುರಸಭೆ ಸದಸ್ಯ ಸಂದೀಪ ಬಂಟ ಅವರು ಬೆಳಗಿನ ಉಪಹಾರ ಮತ್ತು ಚಹಾ ವ್ಯವಸ್ಥೆ ಕಲ್ಪಿಸಿದ್ದರು. ಮಧ್ಯಾಹ್ನದ ಊಟಕ್ಕೂ ಕೂಡ ಇವರು ಸಾಮಗ್ರಿ ಪೂರೈಸಿದ್ದರು. ಆದರೆ ತಾಲೂಕಾಡಳಿತದ ಈ ಕ್ರಮವನ್ನು ಖಂಡಿಸಿ ತಹಶೀಲ್ದಾರರು ಗಂಜಿಕೇಂದ್ರಕ್ಕೆ ಆಗಮಿಸುವಂತೆ ಒತ್ತಾಯಿಸಿದರು.
ಪುರಸಭೆ ಸದಸ್ಯ ಸಂದೀಪ ಬಂಟ ತಹಶೀಲ್ದಾರ ಕಚೇರಿಗೆ ಆಗಮಿಸಿ, ಸ್ಥಳಕ್ಕೆ ಭೇಟಿ ನೀಡುವಂತೆ ವಿನಂತಿಸಿ ಕೊಂಡರೂ ಕೂಡ ಭೇಟಿ ನೀಡುವ ವಿನಯತೆಯನ್ನೂ ತೋರದೆ ಈಗ ಬಿಸಿಲು ಬಿದ್ದಿದ್ದು, ಗಂಜಿಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಮ್ಮ ಅಸಡ್ಡೆಯನ್ನು ಹೊರಹಾಕಿ ವಾಹನವೇರಿ ಕಚೇರಿಯಿಂದ ತೆರಳಿದರು. ಈ ವಿಷಯವನ್ನು ತಿಳಿದ ನೂರಾರು ನಿರಾಶ್ರಿತರು ತಹಶೀಲ್ದಾರ ಕಚೇರಿಗೆ ಆಗಮಿಸಿ ಅವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಬಿಸಿ ತಟ್ಟಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ ವಿ.ಜಿ. ಲಾಂಜೇಕರ ಅವರು ತಮ್ಮ ಕ್ರಮದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರಾದರೂ ಸ್ಥಳೀಯರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಿರಾಶ್ರಿತರ ಒತ್ತಡಕ್ಕೆ ಮಣಿದು ಗಂಜಿಕೇಂದ್ರಕ್ಕೆ ತೆರಳಿ ನಿರಾಶ್ರಿತರ ಮನೆಗಳು ಸ್ವಚ್ಛಗೊಳ್ಳುವವರೆಗೂ ಗಂಜಿಕೇಂದ್ರವನ್ನು ಮುಂದುವರಿಸುವುದಾಗಿ ಭರವಸೆ ನೀಡಿ ಅಲ್ಲಿಂದ ಕಾಲ್ಕಿತ್ತರು. ತಹಶೀಲ್ದಾರರ ಕ್ರಮವನ್ನು ವಿವಿಧ ಪಕ್ಷದ ಪ್ರಮುಖರು ಖಂಡಿಸಿದ್ದಾರೆ.
ಪುರಸಭೆ ಸದಸ್ಯ ಸಂದೀಪ ಬಂಟ, ಪ್ರಮುಖರಾದ ಯಾದು ಗಾಂವ್ಕರ, ಬೀದಿ ಗಾಂವ್ಕರ, ಲೋಕೇಶ ಗಾಂವ್ಕರ, ಸುಜಾತಾ ಗಾಂವ್ಕರ, ಅರುಣ್ ಗಾಂವ್ಕರ, ಪುತ್ತು ಗಾಂವ್ಕರ, ಶಂಕರ ಗಾಂವ್ಕರ, ಭವಾನಿ ಗಾಂವ್ಕರ, ಸುಮಿತ್ರಾ ಗಣಪತಿ ಗಾಂವ್ಕರ, ಸುವರ್ಣ ಗಾಂವ್ಕರ, ಮಹೇಶ ಗಾಂವ್ಕರ, ಧಾಕು ನಾಯ್ಕ, ಶಿವಾನಂದ ಗಾಂವ್ಕರ ಮತ್ತಿತರರು ಉಪಸ್ಥಿತರಿದ್ದರು







