ಸಹಾಗೆ 2 ವಾರ ವಿಶ್ರಾಂತಿಗೆ ಕುಂಬ್ಳೆ ಸಲಹೆ
ಕೋಲ್ಕತಾ, ಅ.12: ಟೆಸ್ಟ್ ಸ್ಪೆಷಲಿಸ್ಟ್ ವೃದ್ದಿಮಾನ್ ಸಹಾಗೆ ಎರಡು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಭಾರತದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ವಿರುದ್ಧ ಬಂಗಾಳ ತಂಡ ಆಡಲಿರುವ ಮೊದಲೆರಡು ರಣಜಿ ಪಂದ್ಯಗಳಲ್ಲಿ ಸಹಾ ಆಡುವುದಿಲ್ಲ ಎನ್ನಲಾಗಿದೆ.
ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 452ಕ್ಕೂ ಅಧಿಕ ಓವರ್‌ಗಳಲ್ಲಿ ವಿಕೆಟ್‌ಕೀಪಿಂಗ್ ನಡೆಸಿದ್ದ 32ರ ಹರೆಯದ ಸಹಾ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ಎರಡು ಬಾರಿ 50ಕ್ಕೂ ಅಧಿಕ ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಮುಂದಿನ ತಿಂಗಳು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಆತಿಥ್ಯವಹಿಸಿಕೊಂಡಿದ್ದು, ಆ ಸರಣಿಗೆ ವೃದ್ದಿಮಾನ್ ತಂಡಕ್ಕೆ ವಾಪಸಾಗಲಿದ್ದಾರೆ.
‘‘ಸತತ 3 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಹಾಗೆ ವಿಶ್ರಾಂತಿ ಪಡೆಯುವಂತೆ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆಂಬ ಮಾಹಿತಿ ತನಗೆ ಲಭಿಸಿದೆ. ಆದ್ದರಿಂದ ಅವರು ಬಂಗಾಳ ತಂಡದಲ್ಲಿ ಮೊದಲೆರಡು ರಣಜಿ ಪಂದ್ಯಗಳನ್ನು ಆಡುವ ನಿರೀಕ್ಷೆಯಿಲ್ಲ. ಸಹಾಗೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಾಕಷ್ಟು ಕೆಲಸದ ಭಾರವಿದೆ. ಅವರಿಗೆ ವಿಶ್ರಾಂತಿ ನೀಡುವುದು ಸೂಕ್ತ’’ ಎಂದು ಬಂಗಾಳ ರಣಜಿ ತಂಡದ ನಾಯಕ ಮನೋಜ್ ತಿವಾರಿ ಹೇಳಿದ್ದಾರೆ.







