ಕಾಸರಗೋಡಿನಲ್ಲಿ ಹಿಂಸಾಚಾರಕ್ಕೆ ತಿರುಗಿದ ಹರತಾಳ
# ಬ್ಯಾಂಕ್, ಸಿಪಿಎಂ ಕಚೇರಿಗೆ ಕಲ್ಲೆಸೆತ, # ವಾಹನ ಸಂಚಾರಕ್ಕೆ ಬಲವಂತದ ತಡೆ
.gif)
ಕಾಸರಗೋಡು, ಅ.13: ಕಣ್ಣೂರು ಪಿಣರಾಯಿಯಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಖಂಡಿಸಿ ಬಿಜೆಪಿ ಕರೆ ನೀಡಿದ್ದ ಇಂದಿನ ಹರತಾಳ ಕಾಸರಗೋಡಿನಲ್ಲಿ ಹಿಂಸಾಚಾರಕ್ಕೆ ತಿರುಗಿದೆ. ಜಿಲ್ಲಾ ಬ್ಯಾಂಕ್ ಮತ್ತು ಸಿಪಿಎಂ ಕಚೇರಿ ಮೇಲೆ ಕಲ್ಲೆಸೆಯಲಾಗಿದೆ. ಕಲ್ಲು ತೂರಾಟದಿಂದ ಬ್ಯಾಂಕ್‌ನ ಕಿಟಿಕಿ ಗಾಜುಗಳು ಹಾನಿಗೀಡಾಗಿವೆ.
ಕರಂದಕ್ಕಾಡಿನಿಂದ ಮೆರವಣಿಗೆ ಮೂಲಕ ಸಾಗಿ ಬಂದ ಬಿಜೆಪಿ ಕಾರ್ಯಕರ್ತರು ನಗರದ ಪೊಲೀಸ್ ಠಾಣೆ ಮುಂಭಾಗದ ಬ್ಯಾಂಕ್ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಗರದ ಎಂ.ಜಿ. ರಸ್ತೆಯ ಸಿಪಿಎಂ ಸ್ಥಳೀಯ ಸಮಿತಿ ಕಚೇರಿ ಮೇಲೂ ಪ್ರತಿಭಟನಕಾರರು ಕಲ್ಲುತೂರಾಟ ನಡೆಸಿದ್ದಾರೆ.
ನಗರದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದಿದ್ದು, ಇದರಿಂದ ಹೆಚ್ಚಿನ ಕಡೆಗಳಲ್ಲಿ ಉದ್ವಿಗ್ನ ಸ್ಥಿತಿ ಕಂಡುಬಂದಿದೆ. ಕಾಸರಗೋಡು-ಕಾಞಂಗಾಡ್ ರಸ್ತೆಯ ಚಂದ್ರಗಿರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದ ಘಟನೆಯೂ ನಡೆದಿದೆ.
ಜಿಲ್ಲೆಯಲ್ಲಿ ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್ಸು ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಗ್ಗೆ ಕೆಲವು ಖಾಸಗಿ ವಾಹನಗಳು ರಸ್ತೆಗಿಳಿದರೂ ಬಂದ್ ಬೆಂಬಲಿಗರು ಬಲವಂತವಾಗಿ ಅವುಗಳಿಗೆ ತಡೆಯೊಡ್ಡಿದರು.
ಹಲವಡೆ ರಸ್ತೆ ಗಳಲ್ಲಿ ಟಯರ್‌ಗೆ ಬೆಂಕಿ ಹಚ್ಚಿ, ಕಲ್ಲುಗಳನ್ನಿರಿಸಿ ಸಂಚಾರಕ್ಕೆ ತಡೆಯೊಡ್ಡಿದ ಘಟನೆ ನಡೆದಿದೆ. ಅಂಗಡಿ-ಮುಂಗಟ್ಟುಗಳು ಮುಚ್ಚಿವೆ. ಬಹುತೇಕ ಶಾಲೆಗಳು ಕಾರ್ಯಾಚರಿಸುತ್ತಿಲ್ಲ. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದೆ. ಜನ, ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಕಾಸರಗೋಡು ನಗರ, ಕುಂಬಳೆ , ಬದಿಯಡ್ಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿವೆ. ಕೆಲವೇ ಕೆಲವು ದ್ವಿಚಕ್ರ ವಾಹನಗಳು ಸಂಚರಿಸುವುದನ್ನು ಬಿಟ್ಟರೆ ಉಳಿದಂತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಗ್ಗೆ ರೈಲಿನಲ್ಲಿ ಬಂದಿಳಿದ ಹಲವು ಪ್ರಯಾಣಿಕರು ವಾಹನ ವ್ಯವಸ್ಥೆ ಇಲ್ಲದೆ ಪರದಾಡುವಂತಾಯಿತು.
ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ಬೆಳಗ್ಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ ಬುಧವಾರ ಕಣ್ಣೂರು ಪಿಣರಾಯಿಯಲ್ಲಿ ಬಿಜೆಪಿ ಕಾರ್ಯಕರ್ತ ರಮಿತ್ ಕೊಲೆಯನ್ನು ಖಂಡಿಸಿ ಬಿಜೆಪಿ ಇಂದು ಕೇರಳ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ನೀಡಿತ್ತು.
ಈ ನಡುವೆ ಕೃತ್ಯಕ್ಕೆ ಸಂಬಂಧ ಪಟ್ಟಂತೆ ಹತ್ತು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.





