ನ್ಯೂಝಿಲೆಂಡ್ ವಿರುದ್ಧ ಮೊದಲ ಏಕದಿನ: ಸುರೇಶ್ ರೈನಾ ಅಲಭ್ಯ

ಹೊಸದಿಲ್ಲಿ, ಅ.13: ಭಾರತದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಧರ್ಮಶಾಲಾದಲ್ಲಿ ರವಿವಾರ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡುವುದಿಲ್ಲ.
ರೈನಾ ಜ್ವರದಿಂದ ಬಳಲುತ್ತಿದ್ದಾರೆ. ರವಿವಾರ ನಿಗದಿಯಾಗಿರುವ ಕಿವೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಲಭ್ಯವಿರುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಇತ್ತೀಚೆಗೆ ಪ್ರಕಟಿಸಲಾದ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದ ರೈನಾ ಭಾರತ ಕ್ರಿಕೆಟ್ ತಂಡದ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲು ಇನ್ನೂ ಕಾಯಬೇಕಾಗಿದೆ. ಮುಂಬೈನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಐದನೆ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿ ಆಡಿದ್ದರು. ಆ ಪಂದ್ಯವನ್ನು ಭಾರತ 214 ರನ್‌ಗಳ ಅಂತರದಿಂದ ಸೋತಿತ್ತು.
ರೈನಾ ರನ್ ಬರ ಎದುರಿಸುತ್ತಿದ್ದ ಕಾರಣ ಆಫ್ರಿಕ ವಿರುದ್ಧದ ಸರಣಿಯ ಬಳಿಕ ನಡೆದ ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಹಾಗೂ ಝಿಂಬಾಬ್ವೆ ವಿರುದ್ಧದ ಪಂದ್ಯದಿಂದಲೂ ರೈನಾರನ್ನು ಕೈಬಿಡಲಾಗಿತ್ತು. ಅಮೆರಿಕದಲ್ಲಿ ನಡೆದ ವಿಂಡೀಸ್ ವಿರುದ್ಧದ 2 ಪಂದ್ಯಗಳ ಟ್ವೆಂಟಿ-20 ಸರಣಿಯಿಂದಲೂ ರೈನಾ ಸ್ಥಾನ ಪಡೆದಿರಲಿಲ್ಲ.
ರೈನಾ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗಿಲ್ಲ. ಅವರು ಬೇಗನೆ ಚೇತರಿಸಿಕೊಂಡು ತಂಡಕ್ಕೆ ವಾಪಸಾಗುವ ವಿಶ್ವಾಸ ನಮಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ರೈನಾ ಮೊದಲ ಪಂದ್ಯದಲ್ಲಿ ಲಭ್ಯವಿರದೇ ಇರುವುದು ಮನ್‌ದೀಪ್ ಸಿಂಗ್‌ಗೆ ಚೊಚ್ಚಲ ಪಂದ್ಯ ಆಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಸಿಂಗ್ ಝಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದಲ್ಲಿದ್ದರು. ಟ್ವೆಂಟಿ-20 ಸರಣಿಯಲ್ಲಿ 31, ಔಟಾಗದೆ 52 ಹಾಗೂ 4 ರನ್ ಗಳಿಸಿದ್ದರು.







