ಇಂದಿರಾಗಾಂಧಿ ಸಿನೆಮಾ ಬಿಡುಗಡೆಗೆ ತಡೆ ನೀಡಲು ದಿಲ್ಲಿಹೈಕೋರ್ಟಿಗೆ ಅರ್ಜಿ

ಹೊಸದಿಲ್ಲಿ,ಅ. 13: ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆ ಮತ್ತು ಆನಂತರವುಂಟಾದ ಸಿಕ್ ವಿರೋಧಿ ದಂಗೆಯನ್ನು ಚಿತ್ರೀಕರಿಸುವ ಬಾಲಿವುಡ್ ಸಿನೆಮಾ 31 ಅಕ್ಟೋಬರ್ ಬಿಡುಗಡೆಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿ ದಿಲ್ಲಿ ಹೈಕೋರ್ಟಿಗೆ ಹೊಸ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಎರಡು ವಾರಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ಅರ್ಜಿಯನ್ನು ಸಲ್ಲಿಸಲಾಗಿತ್ತಾದರೂ ಹೈಕೋರ್ಟು ಅರ್ಜಿ ಅಸ್ಪಷ್ಟವಾಗಿದೆ ಎಂದು ಬೆಟ್ಟು ಮಾಡಿ ತಳ್ಳಿಹಾಕಿತ್ತು ಎಂದು ವರಿಯೊಂದು ತಿಳಿಸಿದೆ.
ನಂತರ ಸೆನ್ಸಾರ್ ಬೋರ್ಡನ್ನು ಪ್ರತಿವಾದಿಯಾಗಿ ಸೇರಿಸಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಅಕ್ಟೋಬರ್ 21ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿರುವ ಸಿನೆಮಾದಲ್ಲಿ ದೇಶದ ಅತ್ಯಂತ ಹಳೆಯ ಪಕ್ಷವೊಂದನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿಯಲ್ಲಿ ಹೈಕೋರ್ಟಿಗೆ ತಿಳಿಸಲಾಗಿದೆ. ಈ ರಾಜಕೀಯ ಪಕ್ಷವನ್ನು ಗುರಿಯಾಗಿಟ್ಟು ಚಿತ್ರನಿರ್ಮಾಣವಾಗಿದ್ದು, ಚಿತ್ರಪ್ರದರ್ಶನಕ್ಕೆ ಅನುಮತಿ ನೀಡುವುದಾದರೂ ಅದರಲ್ಲಿರುವ ಕೆಲವುಭಾಗಗಳನ್ನು ಕಿತ್ತುಹಾಕಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಅಜಯ್ ಕಠಾರ ಎಂಬ ವ್ಯಕ್ತಿ ಕೋರ್ಟಿಗೆ ಅರ್ಜಿಸಲ್ಲಿಸಿದ್ದು,ಸೋಹಾ ಅಲಿಖಾನ್ ಮತ್ತು ವೀರ್‌ದಾಸ್ ಮುಖ್ಯಭೂಮಿಕೆಯಲ್ಲಿರುವ ಚಿತ್ರದ ಟ್ರೈಲರ್, ಪೋಸ್ಟರ್‌ಗಳು ಈಗಾಗಲೇ ಸೋಶಿಯಲ್ ಮೀಡಿಯಗಳಲ್ಲಿ ಚರ್ಚೆಯಾಗುತ್ತಿವೆ ಎಂದು ವರದಿ ತಿಳಿಸಿದೆ.





