ಪತ್ನಿಯ ತಲೆಕೂದಲು ಕತ್ತರಿಸಿದ ಪತಿ
ಅನೈತಿಕ ಸಂಬಂಧಕ್ಕೆ ಕಾಪ್ ಪಂಚಾಯತ್ ಶಿಕ್ಷೆ

ಮುರ್ಶಿದಾಬಾದ್, ಅ.13: ಅನೈತಿಕ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿದ್ದ ಮಹಿಳೆಯನ್ನು ಮನೆಯಿಂದ ಹೊರ ಹಾಕಿದ ಗ್ರಾಮಸ್ಥರು ಶಿಕ್ಷೆಯ ರೂಪದಲ್ಲಿ ಆಕೆಯ ಪತಿಯಿಂದಲೇ ತಲೆ ಕೂದಲು ಕತ್ತರಿಸಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಗ್ರಾಮದಲ್ಲಿ ನಡೆದಿದೆ.
ನೆರೆಮನೆಯವನೊಂದಿಗೆ ಓಡಿ ಹೋಗಿ ಮನೆಗೆ ವಾಪಸಾಗಿದ್ದ 30ರ ಪ್ರಾಯದ ಈ ಮಹಿಳೆಗೆ ಗ್ರಾಮದ ಕಾಪ್ ಪಂಚಾಯತ್ 108 ಬಾರಿ ಬಿದರಿನ ಕೋಲಿನಿಂದ ಥಳಿಸುವಂತೆ ಆದೇಶಿಸಿತ್ತು. 6,000 ರೂ. ದಂಡವನ್ನು ವಿಧಿಸಿತ್ತು. ಈ ದಂಪತಿ ದಂಡ ಪಾವತಿಸಲು ವಿಫಲವಾದಾಗ ಮಹಿಳೆ ವಾಸಿಸುತ್ತಿದ್ದ ಮನೆಗೆ ನುಗ್ಗಿದ ಗ್ರಾಮದ 50ರಷ್ಟಿದ್ದ ಜನರು ಮಹಿಳೆಯನ್ನು ಹೊರಗೆ ಎಳೆದು ತಂದರು. ಆಕೆಯ ಪತಿ ಕೈಯಿಂದಲೇ ಕೂದಲನ್ನು ಕತ್ತರಿಸಿದ್ದಾರೆ.
ಪತಿ ತನ್ನ ಪತ್ನಿಯ ಕೂದಲು ಕತ್ತರಿಸುತ್ತಿದ್ದಾಗ ನೆರೆದಿದ್ದ ಹಳ್ಳಿಯ ಜನ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ಪಂಚಾಯತ್ ಮೇಲಿನ ಭಯದಿಂದ ಈ ದಂಪತಿ ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ. ಪೊಲೀಸರಿಗೆ ಬುಧವಾರ ಈ ಘಟನೆಯ ಬಗ್ಗೆ ತಿಳಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಸಂಬಂಧ ಹಳ್ಳಿಯ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.
14 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಮಹಿಳೆ ನೆರೆಮನೆಯಾತನೊಂದಿಗೆ ತನ್ನ ಮೂವರು ಮಕ್ಕಳ ಜೊತೆಗೂಡಿ ದುರ್ಗಾಪುರಕ್ಕೆ ಪರಾರಿಯಾಗಿದ್ದರು. ಆದರೆ, ಜೊತೆಗೆ ಬಂದಿದ್ದ ಆ ವ್ಯಕ್ತಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಬಳಿಕ ಆ ಮಹಿಳೆ ಮತ್ತೆ ತನ್ನ ಮನೆಗೆ ವಾಪಸಾಗಿದ್ದರು. ಮಹಿಳೆ ತನ್ನ ಮನೆಗೆ ವಾಪಸಾದ ಕೆಲವೇ ಗಂಟೆಯ ಬಳಿಕ ಕಾಪ್ ಪಂಚಾಯತ್ ಈ ಮಹಿಳೆಗೆ ಶಿಕ್ಷೆ ಘೋಷಿಸಿತ್ತು.







